News

ಮಗನಿಗೆ ಆಶೀರ್ವದಿಸಿ ಶಾಲು ಮತ್ತು ತೆಂಗಿನಕಾಯಿ ಉಡುಗೊರೆ ನೀಡಿದ ಹೀರಾಬೆನ್

ಅಹ್ಮದಾಬಾದ್, ಎ23(Daijiworld News/SS): ಗುಜರಾತ್ ರಾಜ್ಯದಲ್ಲಿ ಮತದಾನ ನಡೆದಿದ್ದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ. ಮತದಾನ ಮಾಡುವ ಮೊದಲು ಪ್ರಧಾನಿ ತಮ್ಮ ತಾಯಿ ಹೀರಾಬೆನ್ ಮೋದಿಯವರ ಬಳಿ ತೆರಳಿ ಆಶೀರ್ವಾದ ಪಡೆದಿರುವುದು ವಿಶೇಷವಾಗಿತ್ತು.

ಅಹಮದಾಬಾದ್ ಸಮೀಪ ರೈಸನ್ ಎಂಬ ಗ್ರಾಮದಲ್ಲಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ತಮ್ಮ ಕಿರಿ ಪುತ್ರ ಪಂಕಜ್ ಮೋದಿ ಜೊತೆ ವಾಸಿಸುತ್ತಿದ್ದು, ಅಲ್ಲಿಗೆ ತೆರಳಿದ್ದ ಮೋದಿ ತಾಯಿಯ ಆಶೀರ್ವಾದ ಪಡೆದರು. ಸುಮಾರು 20 ನಿಮಿಷಗಳ ಕಾಲ ತಾಯಿಯೊಂದಿಗೆ ಮಾತನಾಡುತ್ತಾ ಮೋದಿ ಕಾಲ ಕಳೆದರು.

ಗಾಂಧಿನಗರದ ರಾಜಭವನದಲ್ಲಿ ಕಳೆದ ರಾತ್ರಿ ತಂಗಿದ್ದ ನರೇಂದ್ರ ಮೋದಿ ಮತದಾನ ನಡೆಯುವ ಮೊದಲು ಕೇವಲ ಒಂದು ಭದ್ರತಾ ವಾಹನದೊಂದಿಗೆ ನೇರವಾಗಿ ತಮ್ಮ ತಾಯಿ ಮನೆಗೆ ಹೋಗಿದ್ದರು. ಅಲ್ಲಿ ತಮ್ಮ ತಾಯಿಯ ಆಶೀರ್ವಾದ ಪಡೆದು ಪಕ್ಕದಲ್ಲಿ ಕುಳಿತು ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದರು. ಈ ವೇಳೆ ಮಗನಿಗೆ ತಾಯಿಯಿಂದ ಶಾಲು, ತೆಂಗಿನಕಾಯಿಯ ಉಡುಗೊರೆ ಸಿಕ್ಕಿತು.

ಗುಜರಾತ್ ರಾಜ್ಯದ ಎಲ್ಲಾ 26 ಲೋಕಸಭಾ ಕ್ಷೇತ್ರಗಳಲ್ಲಿ ಇಂದೇ ಒಂದು ಹಂತದಲ್ಲಿ ಮತದಾನ ನಡೆಯುತ್ತಿದೆ.