News

ನಾಳೆಯಿಂದ ಹೆದ್ದಾರಿಗಾಗಿ ನೆಲ್ಯಾಡಿಯಿಂದ ಬಿ.ಸಿ. ರೋಡ್‌ವರೆಗೆ ಬೃಹತ್ ಪಾದಯಾತ್ರೆ

ಮಂಗಳೂರು, ಜ 13(MSP): ರಾಷ್ಟ್ರೀಯ ಹೆದ್ದಾರಿ 75ರ ಹಾಸನ- ಗುಂಡ್ಯ- ಬಿ.ಸಿ. ರೋಡ್‌ ನಡುವಣ ಚತುಷ್ಪಥ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಂತಿರುವುದನ್ನು ಪ್ರತಿಭಟಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌ ನೆಲ್ಯಾಡಿಯಿಂದ ಬಿ.ಸಿ. ರೋಡ್‌ವರೆಗೆ 42 ಕಿ.ಮೀಗಳ ಬೃಹತ್ ಪಾದಯಾತ್ರೆ ಜ. 14, 15, 16ರಂದು ನಡೆಯಲಿದೆ.

'ಹೆದ್ದಾರಿ ಕಾಮಗಾರಿ ಸ್ಥಗಿತ ಜಿಲ್ಲೆಯ ಬಹುದೊಡ್ದ ಸಮಸ್ಯೆಯಾಗಿದೆ ಕಾಮಗಾರಿ ಮುಗಿಸದಿದ್ದರೆ ಮಳೆಗಾಲದಲ್ಲಿ ಪ್ರಾಣ ಹಾನಿಯಾಗುವ ಅಪಾಯ ಇದೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ-ಜನರ ಜೀವ ಉಳಿಸಿ'ಘೋಷಣೆಯೊಂದಿಗೆ ಈ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದೇವೆ .ಕಾರ್ಯಕ್ರಮವನ್ನು ಜ. 14ರಂದು ಬೆಳಗ್ಗೆ 9 ಗಂಟೆಗೆ ನೆಲ್ಯಾಡಿ ಬಸ್‌ ತಂಗುದಾಣದ ಬಳಿ ಸಚಿವ ಯು.ಟಿ. ಖಾದರ್‌ ಉದ್ಘಾಟಿಸುವರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಅಧ್ಯಕ್ಷತೆ ವಹಿಸುವರು. ಹಾಸನ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಜಾವುಗಲ್‌, ಶಾಸಕರಾದ ಎಂ.ಇ. ಗೋಪಾಲ ಸ್ವಾಮಿ ಮತ್ತು ಎಚ್.ಕೆ. ಮಹೇಶ್‌, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಡಾ| ರಘು ಉಪಸ್ಥಿತರಿರುವರು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪಾದಯಾತ್ರೆಯು ಅಂದು ಸಂಜೆ 4.30ಕ್ಕೆ ಉಪ್ಪಿನಂಗಡಿ ತಲುಪಿ ಅಲ್ಲಿ ಪ್ರತಿಭಟನ ಸಭೆ ನಡೆಯಲಿದೆ. ಮಾಜಿ ಶಾಸಕರಾದ ವಸಂತ ಬಂಗೇರ, ಎಚ್.ಎಂ. ವಿಶ್ವನಾಥ್‌, ಜೆ.ಆರ್‌. ಲೋಬೊ, ಕೇರಳ ಪಿಸಿಸಿ ವಕ್ತಾರ ಹರೀಶ್‌ ಬಾಬು ಭಾಗವಹಿಸಲಿದ್ದಾರೆ ಎಂದರು. ಜ. 15ರಂದು ಉಪ್ಪಿನಂಗಡಿಯಿಂದ ಹೊರಟು ಸಂಜೆ ಮಾಣಿ ಜಂಕ್ಷನ್‌ ತಲುಪಿ ಪ್ರತಿಭಟನ ಸಭೆನಡೆಯಲಿದೆ.

ಜ. 16ರಂದು ಮಾಣಿಯಿಂದ ಮುಂದುವರಿದು ಸಂಜೆ ಬಿ.ಸಿ. ರೋಡ್‌ ತಲಪುವುದು. ಬಸ್‌ ನಿಲ್ದಾಣದ ಬಳಿ ನಡೆಯುವ ಸಮಾರೋಪದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ನಾರಾಯಣ ರಾವ್‌, ಅರುಣ್‌ ಮಾಚಯ್ಯ, ಮಾಜಿ ಶಾಸಕ ಬಿ.ಎ. ಮೊದಿನ್‌ ಬಾವಾ, ಸವಿತಾ ರಮೇಶ್‌ ಭಾಗವಹಿಸುವರು.ಮೂರು ದಿನಗಳಲ್ಲಿ ಒಟ್ಟು 42 ಕಿ.ಮೀ. ಪಾದಯಾತ್ರೆ ಸಂಚರಿಸಲಿದೆ. ಅಪೂರ್ಣ ಹೆದ್ದಾರಿಯ ಅವ್ಯವಸ್ಥೆ ಭೀಕರವಾಗಿದೆ. ಇದರ ವಿರುದ್ಧ ಪ್ರತಿಭಟಿಸುವುದಾಗಿ ಜಿಲ್ಲಾ ಕಾಂಗ್ರೆಸ್‌ ಹೇಳಿಕೆ ನೀಡಿತ್ತು. ಅದರ ಪ್ರಕಾರ ಪಾದಯಾತ್ರೆ ರೂಪಿಸಲಾಗಿದೆ ಎಂದು ರಮಾನಾಥ ರೈ ವಿವರಿಸಿದರು.