News

ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ, ಆರೋಪಿಯ ಬಂಧನಕ್ಕೆ ಪೊಲೀಸರಿಂದ ಬಲೆ

ಮಂಗಳೂರು, ಜ 12(SM): ಹುಲಿವೇಷ ತರಬೇತಿ ಪಡೆಯಲೆಂದು ಬಂದ ಅಪ್ರಾಪ್ತೆಯನ್ನು ಪುಸಲಾಯಿಸಿ, ಜಿಲ್ಲೆಯ ಹೊರಗಿನ ಲಾಡ್ಜ್‌ಗೆ ಕರೆದೊಯ್ದು ಅಲ್ಲಿ ಸತತ ಅತ್ಯಾಚಾರ ನಡೆಸಿದ ಆರೋಪಿ, ರೌಡಿಶೀಟರ್ ಆಕಾಶಭವನದ ಚರಣ್ ಆಲಿಯಾಸ್ ಶರಣ್‌ಗೆ ಇದೀಗ ತಲೆಮರೆಸಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಅತ್ಯಾಚಾರಕ್ಕೊಳಗಾಗಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಂಡ ಬಳಿಕ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ. ಕೊಲೆ, ಕೊಲೆ ಯತ್ನ ಪ್ರಕರಣದ ಆರೋಪಿಯಾಗಿರುವ ಚರಣ್ ವಿರುದ್ಧ ಇದೀಗ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಜೈಲಿನಲ್ಲಿ ನಡೆದ ಹೊಡೆದಾಟದಲ್ಲೂ ಈತ ಶಾಮೀಲಾಗಿದ್ದ. ಸುಮಾರು ೨೦ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳು ಈತನ ಮೇಲಿವೆ. ಅತ್ಯಾಚಾರ ನಡೆದ ಬಳಿಕ ಬಾಲಕಿ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂದರ್ಭ ಆರೋಪಿ ಚರಣ್ ಪರಾರಿಯಾಗಿದ್ದಾನೆ.