News

ಮಂಗಳೂರು- ಗಾಂಜಾ ಮಾರುತ್ತಿದ್ದವನ ಯುವಕನ ಬಂಧನ

ಮಂಗಳೂರು, ಜ. 11(MSP): ನಗರದ ಬೆಂದೂರ್‌ವೆಲ್‌ ಜಂಕ್ಷನ್‌ ಬಳಿ ಗುರುವಾರ ಹಾಡುಹಗಲೇ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ವೆಲೆನ್ಸಿಯಾ ನಿವಾಸಿ ಮುಹಮ್ಮದ್ ಮನೀಶ್ (20) ಎಂಬ ಯುವಕನನ್ನು ಬಂಧಿಸಿರುವ ನಗರದ ಆರ್ಥಿಕ ಅಪರಾಧಗಳು ಮತ್ತು ಮಾದಕವಸ್ತು ನಿಯಂತ್ರಣ (ಇ ಅಂಡ್‌ ಎನ್‌) ಠಾಣೆ ಪೊಲೀಸರು, 280 ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಆರ್ಥಿಕ ಅಪರಾಧಗಳು ಮತ್ತು ಮಾದಕವಸ್ತು ನಿಯಂತ್ರಣ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ಶ್ಯಾಮ್‌ಸುಂದರ್‌ ಗುರುವಾರ ಬೆಳಿಗ್ಗೆ ಗಸ್ತು ತಿರುಗುತ್ತಿದ್ದ ಸಂದರ್ಭ 10 ಗಂಟೆ ಸುಮಾರಿಗೆ ಬೆಂದೂರ್‌ ಜಂಕ್ಷನ್‌ ಬಳಿಯ ಬ್ಯಾಂಕ್‌ ಶಾಖೆಯೊಂದರ ಎದುರಿನಲ್ಲಿ ವ್ಯಕ್ತಿಯೊಬ್ಬ ಬಟ್ಟೆ ಚೀಲದಲ್ಲಿ ಗಾಂಜಾ ಇರಿಸಿಕೊಂಡು ಮಾರಾಟ ಮಾಡುತ್ತಿರುವ ಕುರಿತು ದೂರು ಬಂದಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ತಂಡ ಸ್ಥಳಕ್ಕೆ ಹೋಗಿ ಆತನನ್ನು ಬಂಧಿಸಿದೆ.

‘ಆರೋಪಿಯಿಂದ 10,800 ಮೌಲ್ಯದ 280 ಗ್ರಾಂ. ಗಾಂಜಾ ಮತ್ತು 15,000 ಮೌಲ್ಯದ ಮೊಬೈಲ್‌ ಫೋನ್‌ ವಶಪಡಿಸಿಕೊಳ್ಳಲಾಗಿದೆ. ಆತ ಕೂಡ ಗಾಂಜಾ ಸೇವಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.