News

ಹಲವಾರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಮಹಿಳೆಯ ಬಂಧನ

ಮೂಡುಬಿದಿರೆ, ಜ 10(SM): ಜಿಲ್ಲೆಯ ವಿವಿದೆಡೆ ಪರ್ಸ್ ಹಾಗೂ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೋರ್ವರನ್ನು ಬಂಧಿಸಿದ್ದಾರೆ. ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಶಾಫಿ ಅವರ ಪತ್ನಿ ಆಯಿಷಾ ಯಾನೆ ಸಮ್ರೀನ್(24) ಬಂಧಿತ ಆರೋಪಿ.

ಈಕೆ ಮೂಡುಬಿದಿರೆಯ ಬನ್ನಡ್ಕದಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದಳೆನ್ನಲಾಗಿದೆ. ಗುರುವಾರ ಮಹಿಳೆಯೊಬ್ಬರು ಅಲಂಕಾರ್ ಫೈನಾನ್ಸ್‌ಗೆ ಚಿನ್ನ ಬಿಡಿಸಲು ಬಂದಿದ್ದಾಗ ಆರೋಪಿ ಮಹಿಳೆ ಗ್ರಾಹಕರ ಚೀಲದಲ್ಲಿದ್ದ ಪರ್ಸನ್ನು ಅಪಹರಿಸಿ ಪರಾರಿಯಾಗಿದ್ದರು. ಪರ್ಸ್‌ನಲ್ಲಿ ಸುಮಾರು ೧೩ ಸಾವಿರ ರೂಪಾಯಿ ನಗದು ಇತ್ತು ಎನ್ನಲಾಗಿದೆ. ಈ ಬಗ್ಗೆ ಮಹಿಳೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದರು.

ಮೂಡುಬಿದಿರೆಯಲ್ಲಿ ಕಳೆದ ಕೆಲ ದಿನಗಳಿಂದ ಪರ್ಸ್, ಚಿನ್ನ ಕಳ್ಳತನದ ಬಗ್ಗೆ ವ್ಯಾಪಕ ದೂರುಗಳಿದ್ದು ಈ ಬಗ್ಗೆ ಪೊಲೀಸರು ನಿಗಾ ವಹಿಸಿದ್ದರು. ಅಲಂಕಾರ್ ಫೈನಾನ್ಸ್‌ನಲ್ಲಿದ್ದ ಸಿಸಿ ಕೆಮರಾದಲ್ಲಿ ಆರೋಪಿ ಮಹಿಳೆ ಪರ್ಸ್ ಕಳ್ಳತನ ಮಾಡುತ್ತಿದ್ದ ದೃಶ್ಯ ಸೆರೆಯಾಗಿತ್ತು. ಇದನ್ನು ಆಧರಿಸಿ ಮೂಡುಬಿದಿರೆ ಪೊಲೀಸರುಗಳಾದ ಅಖಿಲ್ ಅಹ್ಮದ್, ಸಂತೋಷ್, ಯಶೋಧಾ, ಮನ್ಸೂರ್ ಹಾಗೂ ರಾಜೇಶ್ ಕಾರ್‍ಯಾಚರಣೆ ನಡೆಸಿ ಬಸ್‌ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾದರು.

ಕೆಲ ದಿನಗಳ ಹಿಂದೆ ಮುಖ್ಯ ರಸ್ತೆಯಲ್ಲಿರುವ ಮೆಡಿಕಲ್ ಬಳಿ ಗ್ರಾಹಕರೊಬ್ಬರ 21 ಸಾವಿರ ರೂಪಾಯಿ ಕಳ್ಳತನ ಮಾಡಿದ್ದು ಕೂಡ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 34 ಸಾವಿರ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಮಹಿಳೆಯನ್ನು ಮೂಡುಬಿದಿರೆ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.