News

ನೆಚ್ಚಿನ ನಾಯಕನಿಗೆ ಹಾಲಿನ ಅಭಿಷೇಕದ ವೇಳೆ ಅವಘಡ, ಕಟೌಟ್ ಕುಸಿದು ಬಿದ್ದು ಐವರು ಗಂಭೀರ

ತಮಿಳುನಾಡು, ಜ 10(SM): ಇದು ಅತಿರೇಕದ ಅಭಿಮಾನವೋ ತಿಳಿಯದು. ಆದರೆ, ತಮ್ಮ ನೆಚ್ಚಿನ ಚಿತ್ರ ನಟನ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲು ತೆರಳಿದ ಅಭಿಮಾನಿಗಳು ಇದೀಗ ಆಸ್ಪತ್ರೆಗೆ ಸೇರಿದ್ದಾರೆ.

ನೆಚ್ಚಿನ ನಟನ ಬೃಹತ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲು ಹೋಗಿ ಕಟೌಟ್ ಬಿದ್ದು ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ತಮಿಳುನಾಡಿನಲ್ಲಿ ನಡೆದಿದೆ. ಇಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪೇಟಾ' ಚಿತ್ರ ತೆರೆಗೆ ಬಂದಿದೆ. ರಜನಿ ಚಿತ್ರಕ್ಕೆ ಪೈಪೋಟಿ ನೀಡಲು ಅಜಿತ್ ಅಭಿನಯದ 'ವಿಶ್ವಾಸಂ' ಕೂಡ ಇಂದೇ ತೆರೆಗೆ ಅಪ್ಪಳಿಸಿದೆ.

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಈ ಎರಡೂ ಚಿತ್ರಗಳು ರಿಲೀಸ್ ಆಗಿರುವುದು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ. ರಜನಿ ಪೋಸ್ಟರ್ ಗಳಿಗೆ 'ವಿಶ್ವಾಸಂ' ಚಿತ್ರವನ್ನ ಅದ್ಧೂರಿಯಾಗಿ ಬರಮಾಡಿಕೊಳ್ಳಲು ಥಿಯೇಟರ್ ಗಳ ಮುಂದೆ ಅಜಿತ್ ರವರ ಬೃಹತ್ ಕಟೌಟ್ ಗಳನ್ನು ಅಳವಡಿಸಲಾಗಿತ್ತು. ಈ ಪೈಕಿ ಒಂದು ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲು ಅಭಿಮಾನಿಗಳ ದಂಡು ಮೇಲೆ ಹತ್ತಿದ್ದಾರೆ. ಅತಿಯಾದ ಭಾರವನ್ನು ತಡೆಯಲಾರದೆ, ಕಟೌಟ್ ದಿಢೀರನೆ ಕುಸಿದು ಬಿದ್ದಿದೆ.

ಹಾಲಿನ ಅಭಿಷೇಕ ಮಾಡಲು ನಿಂತಿದ್ದ ಅಭಿಮಾನಿಗಳು ಕೂಡ ಕೆಳಗೆ ಬಿದ್ದರು. ಪರಿಣಾಮ ಐವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.