News

ಕಪ್ಪೆಚಿಪ್ಪು ಹೆಕ್ಕಲು ಹೋಗಿ ನದಿ ಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ

ಉಳ್ಳಾಲ, ಜ 08(SM): ಕಪ್ಪೆಚಿಪ್ಪು ಹೆಕ್ಕಲೆಂದು ಇತರೆ ಐವರು ಸ್ನೇಹಿತರ ಜತೆಗೆ ನೇತ್ರಾವತಿ ನದಿಗೆ ತೆರಳಿ ಬಳಿಕ ನಾಪತ್ತೆಯಾಗಿದ್ದ ಬಾಲಕ ಅಬ್ದುಲ್ ಸತ್ತಾರ್ (15) ಮೃತದೇಹ ಪತ್ತೆಯಾಗಿದೆ.

ಪುದು ಗ್ರಾಮ ಅಮ್ಮೆಮ್ಮಾರ್ ನಿವಾಸಿ ಎಂ.ಬಶೀರ್ ಎಂಬವರ ಪುತ್ರ ಅಬ್ದುಲ್ ಸತ್ತಾರ್ ತನ್ನ ಸ್ನೇಹಿತರೊಂದಿಗೆ ಜನವರಿ ೦೮ರ ಸಂಜೆ ಕಪ್ಪೆಚಿಪ್ಪು ಹೆಕ್ಕಲೆಂದು ಫರಂಗಿಪೇಟೆ ಬಳಿ ನದಿಗೆ ತೆರಳಿದ್ದಾರೆ.

ಅಲ್ಲಿ ಕಪ್ಪೆಚಿಪ್ಪು ಹಿಡಿಯುವ ಸಂದರ್ಭ ಆಯತಪ್ಪಿ ನದಿ ನೀರಿಗೆ ಬಿದ್ದ ಸತ್ತಾರ್ ಬಳಿಕ ನಾಪತ್ತೆಯಾಗಿದ್ದ. ಕೂಡಲೇ ಕೊಣಾಜೆ ಠಾಣಾ ಪೊಲೀಸರು ಹಾಗೂ ಸ್ಥಳೀಯ ಈಜುಗಾರರು ನಾಪತ್ತೆಯಾದ ಬಾಲಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು.

ಒಂದು ಗಂಟೆಗಳ ಕಾಲ ನಿರಂತರ ಹುಡುಕಾಟದ ಬಳಿಕ ಬಾಲಕನ ಮೃತದೇಹ ಮುಳುಗಿದ ಜಾಗದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ.

ಕೊಣಾಜೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.