News

ಜಾಗತಿಕ ಕೊಂಕಣಿ ಸಿನೆಮಾ ಪುರಸ್ಕಾರ ಪ್ರದಾನ-‘ಅಂತು’ ಚಿತ್ರದ ಸಾರ್ಥಕ ಸಾಧನೆ

ಮಂಗಳೂರು, ಡಿ 09(SM): ಶಕ್ತಿನಗರದ ಕಲಾಂಗಣದಲ್ಲಿ ಮಾಂಡ್ ಸೊಭಾಣ್ ನಲ್ಲಿ ಜಾಗತಿಕ ಕೊಂಕಣಿ ಸಿನೆಮಾ ಪುರಸ್ಕಾರ ಪ್ರದಾನ ಕಾರ್ಯಕ್ರಮ ಮೊದಲ ಬಾರಿಗೆ ಆಯೋಜಿಸಲಾಗಿತ್ತು. ‘ಅಂತು’ ಸಿನಿಮಾ ಶ್ರೇಷ್ಟ ಕೊಂಕಣಿ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡರೆ, ಸುಜಯ್ ಶಾನುಭಾಗ್ ಶ್ರೇಷ್ಠ ನಟ ಪ್ರಶಸ್ತಿಯನ್ನು ಪಡೆದುಕೊಂಡರು. ಎಸ್ತೆರ್ ನೊರೊನ್ಹಾ ಶ್ರೇಷ್ಟ ನಟಿ ಪ್ರಶಸ್ತಿಗೆ ತನ್ನದಾಗಿಸಿಕೊಂಡರು.

ಡಿ 09ರ ರವಿವಾರದಂದು ಮೊದಲ ಜಾಗತಿಕ ಕೊಂಕಣಿ ಸಿನೆಮಾ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆದಿದ್ದು, ಶ್ರೇಷ್ಟ ಸಾಧಕರಿಗೆ ಬಹುಭಾಷ ನಟ ಪ್ರಕಾಶ್ ರೈ ಪುರಸ್ಕಾರಗಳನ್ನು ಪ್ರಧಾನ ಮಾಡಿದರು. ಬಳಿಕ ಮಾತನಾಡಿದ ಅವರು, ನಾನು ಕೂಡಾ ಇಂತಹ ಕ್ಷಣಗಳನ್ನು ಕಳೆದಿದ್ದೇನೆ. ಕೊಂಕಣಿಯಲ್ಲಿ ನೀವು ಬಾಹುಬಲಿಯಂತಹ ಸಿನೆಮಾ ಮಾಡಬೇಕಿಲ್ಲ. ಆದರೆ ಕೊಂಕಣಿಯಂತಹ ಭಾಷೆಯಲ್ಲಿ ನೀವು ಮಾಡುವ ಈ ಸಣ್ಣ ಕೆಲಸಗಳೇ ಕೊಂಕಣಿ ಸಿನೆಮಾ ಕ್ಷೇತ್ರಕ್ಕೆ ನೀವಿಟ್ಟ ಅಡಿಪಾಯವಾಗಿದೆ. ಸಿನೆಮಾ ನವಶತಮಾನದ ಭಾಷೆ. ಮುಂದಿನ ತಲೆಮಾರಿನ ಭಾಷೆ. ನಿಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಅವರಿಗೆ ನೀಡುವ ಭಾಷೆ. ಸಿನೆಮಾ ದೊಡ್ಡದು ಅಥವಾ ಸಣ್ಣದು ಆಗಿರಲಿ, ಅದರ ಕಷ್ಟ ಸುಖ ಒಂದೇ ಎಂದು ನಟ ಪ್ರಕಾಶ್ ರೈ ಹೇಳಿದರು.

ಕೊಂಕಣಿ ಸಿನೆಮಾ ಕ್ಷೇತ್ರವನ್ನು ಪ್ರೋತ್ಸಾಹಿಸಲು ಹಾಗೂ ಕಲಾವಿದರನ್ನು ಗೌರವಿಸಲು ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಆಯೋಜಿಸಿದ ಈ ಕಾರ್ಯದಲ್ಲಿ 8 ವಿಭಾಗದಲ್ಲಿ ಪುರಸ್ಕಾರಗಳನ್ನು ನೀಡಲಾಯಿತು.

ಗೋವಾದ ಗಾನಕೋಗಿಲೆ ಬಿರುದಾಂಕಿತ ಲೋರ್ನಾ ಇವರು ಕೊಂಕಣಿಯ ಗಾಯನ ಲೋಕದ ದಂತಕಥೆ ಕ್ರಿಸ್ ಪೆರಿ ಇವರ ಪ್ರಖ್ಯಾತ ರಚನೆಗಳಾದ ನಶಿಬಾಕ್ ರಡ್ತಾಂ, ಸರ್ಗ್ ತುಜ್ಯಾ ದೊಳ್ಯಾಂನಿ, ದೆಣೆಂ, ನಾಚುಂಯಾಂ ಕುಂಪಾಸರ್ ಹಾಗೂ ಬೆಬ್ದೊ ಗೀತೆಗಳನ್ನು ಹಾಡಿ ರಂಜಿಸಿದರು.

ಪ್ರತಿಭಾವಂತ ಯುವ ಗಾಯಕಿ ನೈಸಾ ಲೊಟ್ಲಿಕಾರ್ ಮ್ಯಾನ್ವೆಲ್ ಆಫೊನ್ಸೊ ರಚಿತ ಸೊಭಿತ್ ರುಪ್ಣೆಂ ಗೀತೆಯನ್ನು ಹಾಡಿದರು. ಗೋವಾದ ಪ್ರಸಿದ್ಧ ಸಂಗೀತಗಾರರಾದ ನೊರ್ಮನ್ ಕಾರ್ಡೊಜ್ ಇವರ ನೇತೃತ್ವದಲ್ಲಿ ಥಿಯೊ, ನೊಲ್ವರ್ಟ್, ಸೆಮಿ, ಆಂಟೊನಿಯೊ, ಜೊನ್ ಹಾಗೂ ಕ್ಯಾನನ್ ಇವರನ್ನೊಳಗೊಂಡ ತಂಡವು ಸುಮಧುರ ಸಂಗೀತ ನೀಡಿತು.
ನಾಚ್ ಸೊಭಾಣ್ ತಂಡವು ಆಮ್ಚೆಂ ನಶಿಬ್, ನಿರ್ಮೊಣ್, ಮೋಗ್ ಆನಿ ಮಾಯ್ಪಾಸ್ ಹಾಗೂ ನಾಚುಂಯಾ ಕುಂಪಾಸರ್ ಸಿನೆಮಾಗಳ ಹಾಡುಗಳಿಗೆ ವೈವಿಧ್ಯಮಯ ನೃತ್ಯಗಳನ್ನು ಪ್ರಸ್ತುತಪಡಿಸಿತು.

ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಹಾಗೂ ಅಧ್ಯಕ್ಷ ಲುವಿ ಜೆ ಪಿಂಟೊ ಗಣ್ಯ ಅತಿಥಿಗಳಾದ ಪ್ರಕಾಶ್ ರೈ, ಕಾರ್ಯಕ್ರಮದ ಪ್ರಾಯೋಜಕರಾದ ಹಿಸ್ನಾ ಇಂಟರ್‌ನ್ಯಾಶನಲ್ ಮಾಲಿಕ ರೊನಾಲ್ಡ್ ಪಿಂಟೊ, ನಗದು ಬಹುಮಾನಗಳ ಪ್ರಾಯೋಜಕ ನೆಲ್ಸನ್ ರೊಡ್ರಿಕ್ಸ್ ದುಬಾಯಿ ಹಾಗೂ ಸಹ ಪ್ರಾಯೋಜಕರಾದ ದುಬ್ವಾ ಪ್ರೊಡಕ್ಷನ್ ಸಂಸ್ಥೆಯ ಡಿಕ್ಸನ್ ಡಿಸೋಜ ಇವರನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ಪುರಸ್ಕಾರಕ್ಕೆ ಅಂತಿಮಗೊಂಡ ಪ್ರತಿ ವಿಭಾಗದ ಮೂವರನ್ನು, ತೀರ್ಪುದಾರರನ್ನು ಹಾಗೂ ಕಾರ್ಯಕ್ರಮ ನೀಡಿದ ಕಲಾವಿದರನ್ನು ಗೌರವಿಸಲಾಯಿತು.

ಪ್ರಶಸ್ತಿ ವಿಜೇತರು:
1. ಶ್ರೇಷ್ಠ ಚಲನಚಿತ್ರ-ಅಂತು

2. ಶ್ರೇಷ್ಠ ನಿರ್ದೇಶಕ- ಕರೋಪಾಡಿ ಅಕ್ಷಯ್ ನಾಯಕ್ (ಅಂತು)

3. ಶ್ರೇಷ್ಠ ನಟ-ಸುಜಯ್ ಶ್ಯಾನುಭಾಗ್(ಅಂತು)

4. ಶ್ರೇಷ್ಠ ನಟಿ-ಎಸ್ತೆರ್ ನೊರೊನ್ಹಾ(ಸೊಫಿಯಾ)

5. ಶ್ರೇಷ್ಠ ಪೋಷಕ ನಟ-ರೊನ್ ರೊಡ್ರಿಗಸ್(ಏಕ್ ಆಸ್ಲ್ಯಾರ್ ಏಕ್ ನಾ)

6. ಶ್ರೇಷ್ಠ ಪೋಷಕ ನಟಿ-ಪೂರ್ಣಿಮಾ ಸುರೇಶ್(ಅಂತು)

7. ಶ್ರೇಷ್ಠ ಸಾಹಿತ್ಯ-ಹ್ಯಾರಿ ಫೆರ್ನಾಂಡಿಸ್(ಸೊಫಿಯಾ)

8. ಶ್ರೇಷ್ಠ ಸಂಗೀತ-ಕ್ರೈಸ್ಟ್ ಸಿಲ್ವಾ/ಜೊಯೆಲ್ ಫೆರ್ನಾಂಡಿಸ್/ಟೈರನ್ ನೊರೊನ್ಹಾ