News

ಕಾಸರಗೋಡು: ಮರದ ರೆಂಬೆ ಮುರಿದು ಬಾವಿಗೆ ಬಿದ್ದು ಬಾಲಕ ಮೃತ್ಯು

ಕಾಸರಗೋಡು, ಡಿ 09(SM): ನೆಲ್ಲಿಕಾಯಿ ಕೊಯ್ಯಲು ಮರವೇರಿದ್ದ ಬಾಲಕನೋರ್ವ ರೆಂಬೆ ಮುರಿದು ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ರವಿವಾರ ಕಾಸರಗೋಡಿನ ಪಳ್ಳಿಕೆರೆ ಬಳಿ ನಡೆದಿದೆ. ಪಳ್ಳಿಕೆರೆ ಮೂಕಾಡ್ ನ ಚಂದ್ರನ್ ಎಂಬವರ ಪುತ್ರ 12ರ ಹರೆಯದ ಅಭಿಜಿತ್ ಮೃತ ಬಾಲಕ.

ರವಿವಾರದಂದು ರಜೆ ಇದ್ದ ಹಿನ್ನೆಲೆ ಅಭಿಜಿತ್ ತಮ್ಮ ಮನೆ ಪರಿಸರದಲ್ಲಿದ್ದ ನೆಲ್ಲಿಕಾಯಿ ಮರವನ್ನೇರಿ ಕಾಯಿಗಳನ್ನು ಕೊಯ್ಯುತ್ತಿದ್ದ. ಈ ಸಂದರ್ಭ ಮರದ ರೆಂಬೆ ಮುರಿದಿದ್ದು ಬಾಲಕ ಮರದ ಕೆಳಗಡೆ ಇದ್ದಂತಹ ಬಾವಿಗೆ ಬಿದ್ದಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಮತ್ತು ನಾಗರಿಕರು ಸ್ಥಳಕ್ಕೆ ದೌಡಾಯಿಸಿ ಬಾಲಕನನ್ನು ಮೇಲಕ್ಕೆತ್ತಿ ಕಾಞ೦ಗಾಡ್ ಆಸ್ಪತ್ರೆಗೆ ತಲುಪಿಸಿದರಾದರೂ ಬಾಲಕನ ಜೀವ ಉಳಿಸಲಾಗಲಿಲ್ಲ.

ಮೃತದೇಹವನ್ನು ಕಾಸರಗೋಡು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಘಟನೆಯ ಬಗ್ಗೆ ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.