News

ಉಡುಪಿ: ಮತ್ತೆ ಅಧಿಕಾರ ಪಡೆಯಲು ಬಿಜೆಪಿಯಿಂದ ರಾಮಮಂದಿರ ನಿರ್ಮಾಣದ ಕುತಂತ್ರ

ಉಡುಪಿ, ನ 06(SM): ಚುನಾವಣೆ ಹತ್ತಿರ ಬಂದಾಗ ಹಿಂದೂ ಮತದಾರರನ್ನು ಆಕರ್ಷಿಸಿ ಗದ್ದುಗೆ ಏರುವ ನಿಟ್ಟಿನಲ್ಲಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಕುತಂತ್ರ ರೂಪಿಸಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ಉಡುಪಿ ಜಿಲ್ಲಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.

ಅವರು ಭಾರತ ಕಮ್ಯೂನಿಸ್ಟ್ ಪಕ್ಷ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಅಜ್ಜರಕಾಡು ಹುತಾತ್ಮರ ಚೌಕಿಯಲ್ಲಿ ಗುರುವಾರ ನಡೆದ ಸಂವಿಧಾನ ಮತ್ತು ಜಾತ್ಯಾತೀತತೆ ಸಂರಕ್ಷಣೆಗಾಗಿ ವಾಹನ ಪ್ರಚಾರ ಹಾಗೂ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.

ರಾಮ ಮಂದಿರ ಕಟ್ಟುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಮುಸ್ಲಿಮರು ಕೂಡಾ ಮಾತನಾಡುತ್ತಿಲ್ಲ. ಆದರೆ ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಾಣವೇ ಎನ್ನುವ ಪ್ರಶ್ನೆ ನಮ್ಮೆಲ್ಲರ ಮುಂದಿದೆ. ಪೇಜಾವರ ಶ್ರೀಗಳು ಕೂಡಾ ನ್ಯಾಯಾಂಗ ತೀರ್ಪಿಗೆ ಕಾಯುವ ಅಗತ್ಯವಿಲ್ಲ. ಸುಗ್ರಿವಾಜ್ಞೆ ಹೊರಡಿಸಿ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಯಾರಿಗೂ ಪ್ರಶ್ನಿಸುವ ಸ್ವಾತಂತ್ರ್ಯ ಸಿಕ್ಕಿಲ್ಲ. ಒಂದು ಧರ್ಮವನ್ನು ಅವಹೇಳನಕಾರಿ ಮಾಡಿ ಸಮಾಜದ ನೆಮ್ಮದಿ ಕೆಡಿಸುವ ಕೆಲಸವಾಗುತ್ತಿದೆ. ಇದು ಜಾತ್ಯಾತೀತತೆಗೆ ಧಕ್ಕೆ ತರಲಿದೆ ಎಂದರು.