News

ಕಾಸರಗೋಡು: ಬಾಬರಿ ಮಸೀದಿ ಧ್ವಂಸ ದಿನ-ಕಾಸರಗೋಡಿನ ಹಲವೆಡೆ ಅಹಿತಕರ ಘಟನೆ

ಕಾಸರಗೋಡು, ಡಿ 06(SM): ಬಾಬರಿ ಮಸೀದಿ ಧ್ವಂಸ ದಿನವಾದ ಗುರುವಾರ ಕಾಸರಗೋಡಿನ ಕೆಲವು ಕಡೆಗಳಲ್ಲಿ ಬಸ್ಸಿಗೆ ಕಲ್ಲೆಸೆತ ಸೇರಿದಂತೆ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿದೆ.

ಇದರಿಂದಾಗಿ ಹಲವು ಭಾಗಗಳಲ್ಲಿ ಬಸ್ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕುಂಬಳೆಯ ಶಿರಿಯ, ಮಂಜೇಶ್ವರದ ಉದ್ಯಾವರ, ಅರಿಬೈಲ್ ಮೊದಲಾದೆಡೆ ಬಸ್ಸುಗಳ ಮೇಲೆ ಕಲ್ಲೆಸೆಯಲಾಗಿದೆ. ಅರಿಬೈಲ್ ನಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳು ಖಾಸಗಿ ಬಸ್ಸಿಗೆ ಕಲ್ಲೆಸೆದಿದ್ದು, ಚಾಲಕ ಬೋರ್ಕಳದ ಅಝೀಝ್ ಎಂಬವರು ಗಾಯಗೊಂಡಿದ್ದು ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಶಿರಿಯ ದೇವಸ್ಥಾನ ಬಳಿ ಕೆಎಸ್ಆರ್ ಟಿಸಿ ಬಸ್ಸಿಗೆ ಕಲ್ಲೆಸೆಯಲಾಗಿದ್ದು, ಚಾಲಕ ಹಾಗೂ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಉದ್ಯಾವರ ಹತ್ತನೇ ಮೈಲ್ ನಲ್ಲಿ ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸಿಗೂ ಕಲ್ಲೆಸೆಯಲಾಗಿದ್ದು, ಹಾನಿಯಾಗಿದೆ.

ಈ ಹಿನ್ನಲೆಯಲ್ಲಿ ಬಸ್ಸುಗಳು ಬೆಳಿಗ್ಗೆಯಿಂದ ವಿಳಂಬವಾಗಿ ಸಂಚಾರ ನಡೆಸಿದವು. ಇನ್ನು ಅಹಿತಕರ ಘಟನೆ ಮರುಕಳಿಸದಂತೆ ಜಿಲ್ಲೆಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.