News

ಉಡುಪಿ: ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ, ಆರೋಪಿಯನ್ನು ಬಂಧಿಸುವಂತೆ ಕೋರ್ಟ್ ಆದೇಶ

ಉಡುಪಿ, ಡಿ 05(SM): ಮನೆಯೊಂದಕ್ಕೆ ಆಕ್ರಮವಾಗಿ ನುಗ್ಗಿ ಮೂವರು ಸಹೋದರರಿಗೆ ಮರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂದಿಸಿ ದಿನಕರ್ ಹೆರ್ಗ ಅವರನ್ನು ಬಂದಿಸಿ ವಿಚಾರಣೆ ನಡೆಸುವಂತೆ ಉಡುಪಿ ಸಿವಿಲ್ ಕೊರ್ಟು ಪೋಲಿಸ್ ಇಲಾಖೆಗೆ ಆದೇಶ ನೀಡಿದೆ.

2015ರ ಜೂನ್ 15 ರಂದು ಆರೋಪಿ ದಿನಕರ್ ಶೆಟ್ಟಿ ಹೆರ್ಗ ಹಾಗೂ ಆತನ ಸಹೋದರ ಪ್ರಕಾಶ್ ಶೆಟ್ಟಿ ಸಂಬಂಧಿ ರಾಕೇಶ್ ಶೆಟ್ಟಿ ಮತ್ತು ಸುಮಾರು 35 ಮಂದಿಯ ತಂಡ ಮಣಿಪಾಲ ಸಮೀಪದ ಸರಳಬೆಟ್ಟು ನಿವಾಸಿ ಪೀಟರ್ ಡಿಸೋಜಾ ಅವರ ಮನೆಗೆ ನುಗ್ಗಿ ಪೀಟರ್ ಡಿಸೋಜಾ ಸಹಿತ ಮೂವರು ಸಹೋದರರಿಗೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿತ್ತು.

ಹಲ್ಲೆಯಲ್ಲಿ ಮೂವರು ಸಹೋದರರು ಗಂಭೀರವಾಗಿ ಗಾಯಗೊಂಡು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದರು. ಈ ಪ್ರಕರಣಕ್ಕೆ ಸಂಬಂದಿಸಿ 15 ಮಂದಿಯನ್ನು ಪೋಲಿಸರು ಬಂಧಿಸಿ ಉಡುಪಿ ನ್ಯಾಯಾಲಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲವು ಆರೋಪಿಗಳಿಗೆ 17 ದಿನಗಳ ನ್ಯಾಯಾಂಗ ಬಂಧನ ವಿಧಿಸುವ ಮೂಲಕ ಹಿರಿಯಡ್ಕ ಜೈಲಿಗೆ ಕಳಿಸಿತ್ತು.

ಆದರೆ ಪ್ರಕರಣದ ಪ್ರಮುಖ ರೂವಾರಿ ಉಡುಪಿ ನಗರಸಭಾ ಮಾಜಿ ಸದಸ್ಯ ದಿನಕರ್ ಶೆಟ್ಟಿ ತನ್ನ ರಾಜಕೀಯ ಪ್ರಭಾವವನ್ನು ಬಳಸಿ ತನ್ನ ಹೆಸರನ್ನು ಪ್ರಕರಣದಲ್ಲಿ ಬಾರದಂತೆ ನೋಡಿಕೊಂಡಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಪೀಟರ್ ಡಿಸೋಜಾ ಹಾಗೂ ಅವರ ಮೂವರು ಸಹೋದರರು ಉಡುಪಿ ಸಿವಿಲ್ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು.

ಇದೀಗ ಪ್ರಕರಣದ ವಿಚಾರಣೆ ನಡೆಸಿದ ಸಿವಿಲ್ ಕೋರ್ಟಿನ ನ್ಯಾಯಾದೀಶರು ದಿನಕರ್ ಶೆಟ್ಟಿ ಅವರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ಮಣಿಪಾಲ ಠಾಣಾ ಪೋಲಿಸರಿಗೆ ಆದೇಶ ನೀಡಿದೆ. ಕೋರ್ಟಿನಿಂದ ಆದೇಶ ಹೊರ ಬಿದ್ದ ಸುದ್ದಿ ಕೇಳುತ್ತಿದ್ದಂತೆ ಆರೋಪಿ ದಿನಕರ್ ಶೆಟ್ಟಿ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.