News

ವಿಟ್ಲ: ರಸ್ತೆ ಪಕ್ಕದ ಮನೆಯ ಮೇಲೆ ಉರುಳಿದ ಕಾರು, ಮೂವರಿಗೆ ಗಂಭೀರ ಗಾಯ

ವಿಟ್ಲ, ಡಿ 05(SM): ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯ ಕೆಳ ಭಾಗದಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಘಟನೆ ಕನ್ಯಾನ ಗ್ರಾಮದ ಮಾರಾಟಿಮೂಲೆ ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಕನ್ಯಾನ ಗ್ರಾಮದ ಕೇಪುಳಗುಡ್ಡೆ ನಿವಾಸಿ ಅಬೂಬಕ್ಕರ್, ನೆಬಿಸ ಗಂಭೀರ ಗಾಯಗೊಂಡಿದ್ದಾರೆ. ಇದೇ ಸಂದರ್ಭ ಮನೆಯ ಹೊರಗಡೆ ಪಾತ್ರೆಗಳನ್ನು ತೊಳೆಯುತ್ತಿದ್ದ ಮಹಿಳೆ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಕಾರು ಚಾಲಕ ಉಮ್ಮರ್ ಅವರು ಅಪಾಯದಿಂದ ಪಾರಾಗಿದ್ದಾರೆ. ಉಮ್ಮರ್ ಅವರು ತನ್ನ ತಂದೆ ತಾಯಿಗಳ ಜತೆ ಮಂಗಳೂರು ಆಸ್ಪತ್ರೆಯಿಂದ ಆನೆಕಲ್ಲು ರಸ್ತೆ ಮೂಲಕ ಕನ್ಯಾನಕ್ಕೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಇನ್ನು ಭವಾನಿ ಅವರಿಗೆ ಸೇರಿದ ಮನೆಯ ಮೇಲೆ ಕಾರು ಉರುಳಿದ್ದು, ಈ ಸಂದರ್ಭ ಅವರ ಸೊಸೆ ಸೌಮ್ಯ ಪಾತ್ರೆ ತೊಳೆಯುತ್ತಿದ್ದರು. ಕಾರು ಬಿದ್ದ ರಭಸಕ್ಕೆ ಮನೆಯ ಶೀಟುಗಳು ಅವರ ಮೇಲೆ ಬಿದ್ದು ಗಾಯಗೊಂಡಿದ್ದಾರೆ.

ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.