News

ಹೇಗೆ ಸೋತೆ ಅಂತಾ ಈಗಲೂ ಧಿಗ್ಭ್ರಮೆಯಾಗುತ್ತದೆ- ಮಾಜಿ ಸಿಎಂ ಸಿದ್ದರಾಮಯ್ಯ

ದಾವಣಗೆರೆ, ಡಿ 05 (MSP): ಜನತೆ ಯಾವ ಆಧಾರದ ಮೇಲೆ ಓಟು ನೀಡುತ್ತಾರೆ ಎಂದು ಅರ್ಥನೇ ಆಗುತ್ತಿಲ್ಲ, ಮುಖ್ಯಮಂತ್ರಿಯಾಗಿದ್ದರೂ ನನ್ನನೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರರು ಸೋಲಿಸಿದರು. ನಾನು ಸೋಲುತ್ತೇನೆಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯಯ್ಯ ಹೇಳಿದ್ದಾರೆ.

ಅವರು ಹರಪನಹಳ್ಳಿ ಪಟ್ಟಣದಲ್ಲಿ ಡಿ.05 ರ ಮಂಗಳವಾರ ಮಾಜಿ ಶಾಸಕ ಎಂ.ಪಿ ರವೀಂದ್ರ ನುಡಿ- ನಮನ ಕಾರ್ಯಕ್ರಮದಲ್ಲಿ ಮಾತನಾಡಿ ,ನನಗೆ ಅನಿಸುತ್ತೆ, ರಾಜ್ಯದ ಇತಿಹಾಸದಲ್ಲಿ ಕಳೆದ ಬಾರಿಯ ಕಾಂಗ್ರೆಸ್ ಆಡಳಿತದ ನಮ್ಮ ಸರ್ಕಾರವೂ ಅಭಿವೃದ್ದಿ ಕೆಲಸ ಮಾಡಿದಷ್ಟು ಹೆಚ್ಚು ಕೆಲಸ ಯಾವ ಸರ್ಕಾರ ಮಾಡಿರಲಿಕ್ಕಿಲ್ಲ ಎಂದರು.

ಮುಖ್ಯಮಂತ್ರಿ ಆಗಿ ಮಾತ್ರವಲ್ಲದೆ , 1994 ರಲ್ಲಿ ಹಣಕಾಸು ಸಚಿವನಾಗಿ, 13 ಸಲ ಬಜೆಟ್ ಮಂಡಿಸಿ, 5 ಮುಖ್ಯಮಂತ್ರಿಗಳಡಿ ಕೆಲಸ ಮಾಡಿದವನು ನಾನು. ಎಸ್ .ಆರ್ ಬೊಮ್ಮಯಿ , ಜೆ.ಎಚ್ ಪಟೇಲ್, ಧರಂ ಸಿಂಗ್ , ಇವರ ಸರ್ಕಾರದಲ್ಲಿ ಕೆಲಸ ಮಾಡಿದ್ದ ಅನುಭವವಿದೆ. ಅಷ್ಟೊಂದು ಬಜೆಟ್ ಮಂಡಿಸಿದ್ದ ನಾನು ಹಣಕಾಸು ಸಚಿವನಾಗಿದ್ದಾಗ ಕೊಡಲಾಗದಷ್ಟು ಅನುದಾನ ರಾಜ್ಯದ ಮುಖ್ಯಮಂತ್ರಿಯಾಗಿ ಕೊಟ್ಟಿದ್ದೇನೆ. ಚಾಮುಂಡಿ ಕ್ಷೇತ್ರದಲ್ಲಿ ಸೋಲುತ್ತೇನೆಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಇಷ್ಟೆಲ್ಲಾ ಕೆಲಸ ಮಾಡಿದ್ದೀನಿ, ಹೇಗೆ ಸೋತೆ ಅಂತಾ ಈಗಲೂ ದಿಗ್ಬ್ರಮೆಯಾಗುತ್ತದೆ ಎಂದರು.