News

ಮಂಗಳೂರು: ನನ್ನ ನಾಪತ್ತೆ ಪ್ರಕರಣದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಮದನ್ ಪಾತ್ರವಿಲ್ಲ - ವಿನಾಯಕ್

ಮಂಗಳೂರು, ಡಿ 04 (MSP): ಮಾಜಿ ಪೊಲೀಸ್ ಅಧಿಕಾರಿ ಮದನ್ ಅವರೊಂದಿಗೆ ವಾಸವಾಗಿದ್ದು ಬಳಿಕ ನಾಪತ್ತೆಯಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ್ ಪತ್ತೆಯಾಗಿದ್ದು, ತಮ್ಮ ನಾಪತ್ತೆಗೆ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. ನನ್ನ ನಾಪತ್ತೆ ಪ್ರಕರಣದಲ್ಲಿ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ ಮದನ್ ಅವರ ಪಾತ್ರವಿಲ್ಲ. " ಅರ್ಧಕ್ಕೆ ನಿಂತು ಹೋಗಿದ್ದ ನನ್ನ ಹಾಗೂ ನನ್ನ ಅಕ್ಕನ ವಿದ್ಯಾಭ್ಯಾಸ ಮುಂದುವರಿಸಬೇಕು ಎನ್ನುವ ಇಚ್ಚೆ ನನಗಿತ್ತು. ಹೀಗಾಗಿ ನನ್ನ ಕಾಲ ಮೇಲೆ ನಾನು ನಿಂತು ಸಂಪಾದಿಸಬೇಕು ಎನ್ನುವ ಉದ್ದೇಶದಿಂದ ಅಕ್ಟೋಬರ್ - 8 ರ 5.30ಕ್ಕೆ ಮದನ್ ಅವರ ಮನೆಯಿಂದ ಯಾರಿಗೂ ಹೇಳದೆ ಹೊರಟು ಹೋಗಿದ್ದೆ" ಎಂದಿದ್ದಾರೆ.

ನಾನು ಕೊಚ್ಚಿಯಲ್ಲಿ ಉದ್ಯೋಗಕ್ಕೆ ಸೇರಿದ್ದೆ. ಕಳೆದ ಒಂದೂವರೆ ತಿಂಗಳಿಂದ ಸೋಷಿಯಲ್ ಮೀಡಿಯಾ ಹಾಗೂ ಮೊಬೈಲ್ ಬಳಸುತ್ತಿರಲಿಲ್ಲ. ಹೀಗಾಗಿ ಇಲ್ಲಿ ನಡೆದ ವಿಚಾರಗಳಾವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಮದನ್ ಅವರ ಬಗ್ಗೆ ನನಗೆ ಗೌರವವಿದೆ. ನನ್ನ ನಾಪತ್ತೆಯಲ್ಲಿ ಮದನ್ ಕೈವಾಡವಿದೆ ಎಂದು ಆರೋಪಿಸಿದ ನನ್ನ ತಂದೆಯವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ನಾನು ನಾಪತ್ತೆಯಾದ ಬಳಿಕ ತಂದೆ ತಾಯಿ ನನ್ನ ಹುಡುಕಲು ಪ್ರಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಆದ್ರೆ ಈ ಹುಡುಕಾಟದಲ್ಲಿ ಪೋಷಕರು ಮದನ್ ಅವರ ಮೇಲೆ ಆರೋಪಿಸಿ ಎಡವಿದ್ದಾರೆ ಎನ್ನುವ ನೋವಿದೆ ಎಂದು ವಿನಾಯ ಹೀಳಿದರು.

ನನಗೆ ನನ್ನ ಸ್ವಂತ ಸಂಪಾದನೆಯಲ್ಲಿ ಬದುಕಬೇಕು ಎನ್ನುವ ಉದ್ದೇಶವಿತ್ತು. ಇದೇ ಯೋಚನೆಯಲ್ಲಿ ಮನೆ ತೊರೆದಿದ್ದೆ ಎಂದು 'ದಾಯ್ಜಿವಲ್ಡ್' ನೊಂದಿಗೆ ಮಾತನಾಡಿದ ವಿನಾಯಕ್ ಸ್ಪಷ್ಟಪಡಿಸಿದ್ದಾರೆ.

ವಿನಾಯಕ್ ಪೋಷಕರು ಮಗನನ್ನು ಹುಡುಕಿ ತರುವಂತೆ ಹೈಕೋರ್ಟ್ ಮೆಟ್ಟಿಲೇರಿ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು.ಈ ಹಿನ್ನಲೆಯಲ್ಲಿ ಕೇರಳದ ಕೊಚ್ಚಿನ್ ನಲ್ಲಿದ್ದ ವಿನಾಯಕ್ ನನ್ನು ಪತ್ತೆ ಮಾಡಿ ಪೊಲೀಸರು ಮಂಗಳೂರಿಗೆ ಕರೆ ತಂದಿದ್ದಾರೆ.