News

ತ್ರಿ ಭಾಷಾ ಸಿನಿಮಾವಾಗಿ ಸುಪರ್‌ ಮ್ಯಾನ್‌ ಆಫ್‌ ತುಳುನಾಡು - 'ಅಗೋಳಿ ಮಂಜಣ್ಣ'

ಮಂಗಳೂರು,ಡಿ 04 (MSP): ತುಳುನಾಡಿನ ಜಗಜಟ್ಟಿ, ವೀರಪುರುಷ ಎಂದೇ ಹೆಸರಾದ "ಅಗೋಳಿ ಮಂಜಣ್ಣ' ಒಬ್ಬ ಅಸಾಧ್ಯ ಧೈರ್ಯ ಶಾಲಿ.ಒಂದೇ ಬಾರಿಗೆ ಹತ್ತು ಮುಡಿ ಅಕ್ಕಿ ಎತ್ತಬಲ್ಲ ಮಹಾ ಬಲಶಾಲಿ, ಹಾಗೂ ಶಕ್ತಿಶಾಲಿ ಅಗೋಳಿ ಮಂಜಣ್ಣ ಜೀವನಾಧರಿತ ಕಥೆ ಇದೀಗ ತ್ರಿ ಭಾಷಾ ಸಿನಿಮಾವಾಗಿ ಮೂಡಿಬರಲಿದೆ.

ಸುಮಾರು ನಾಲ್ಕೈದು ತಲೆಮಾರುಗಳ ಹಿಂದೆ, ಮಂಗಳೂರಿನ ಸುರತ್ಕಲ್‌ ಸಮೀಪದ ಚೇಳಾರ್‌ ಗುತ್ತಿನಲ್ಲಿ ಬಾಳಿ ಬದುಕಿದ ಇತಿಹಾಸ ಹೊಂದಿರುವ ಅಗೋಳಿ ಮಂಜಣ್ಣ ಪಾತ್ರದಲ್ಲಿ, ಅಂತಾರಾಷ್ಟ್ರೀಯ ಕ್ರೀಡಾಪಟು ಕೋಟಿ ಚೆನ್ನಯ ಧಾರಾವಾಹಿ ಖ್ಯಾತಿಯ ರೋಹಿತ್‌ ಕುಮಾರ್‌ ಕಟೀಲು ಅಗೋಳಿ ಮಂಜಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಅರ್ಪಿಸುವ ಮುಂಬಯಿಯ ಸಕ್ಸಸ್‌ ಫಿಲ್ಮ್ ಇಂಡಿಯಾ ಬ್ಯಾನರ್‌ನಲ್ಲಿ ,ಸುಧೀರ್‌ ಅತ್ತಾವರ್‌ ನಿರ್ದೇಶನದಲ್ಲಿ ತುಳು -ಕನ್ನಡ -ಮರಾಠಿ ಭಾಷೆಯ ಚಿತ್ರ ತಯಾರಾಗುತ್ತಿದ್ದು, ನಾಯಕಿಯಾಗಿ ಗುಜರಾತಿ ನಟಿ ಹಿಮಾಂಗಿನಿ ಅಭಿನಯಿಸುತ್ತಿದ್ದು, ಮಾಜಿ ಸಚಿವ ಅಭಯಚಂದ್ರ ಜೈನ್‌, ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ್‌ ಆಳ್ವ ಈ ಚಿತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ.

ಸಿನಿಮಾದ ಮೂರು ದಿನಗಳ ಪ್ರೋಮೋ ಶೂಟಿಂಗ್‌ ಈಗಾಗಲೇ ನಡೆದಿದ್ದು ಚಿತ್ರದಲ್ಲಿ ಬಾಲಿವುಡ್‌ ಮತ್ತು ಸ್ಯಾಂಡಲ್‌ವುಡ್‌ನ‌ ಹಲವೂ ಕಲಾವಿದರಿದ್ದಾರೆ. ಚಿತ್ರಕ್ಕಾಗಿ ಬಾಲಿವುಡ್‌ನ‌ ಶಫಿ ಖಾನ್‌ ಕೆಮರಾ ಹಿಡಿಯಲಿದ್ದಾರೆ. ಚಂದ್ರಕಾಂತ್‌ ಅವರ ಸಂಗೀತ, ಸಂಕಲನದಲ್ಲಿ ವಿದ್ಯಾಧರ್‌, ಸುಧೀರ್‌ ಜತೆಯಾಗಲಿದ್ದಾರೆ. ಕಥೆ-ಚಿತ್ರಕಥೆಗೆ ಪ್ರೊ| ಜಯಪ್ರಕಾಶ ಮಾವಿನಕುಳಿ ಮತ್ತು ರಾಜಶೇಖರ್‌ ಸೇರಿಕೊಂಡಿದ್ದು ಆಗೋಳಿ ಮಂಜಣ್ಣ ತುಳು ಚಿತ್ರರಂಗದಲ್ಲಿ ಒಂದು ಅಪರೂಪದ ಮೈಲಿಗಲ್ಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.