News

ಮೆಲ್ಕಾರ್: ಬಸ್ ಢಿಕ್ಕಿಯಾಗಿ ಮಹಿಳೆ ಸಾವು - ಉದ್ರಿಕ್ತರಿಂದ ಬಸ್ಸಿಗೆ ಕಲ್ಲೆಸೆದು ಹಾನಿ

ಬಂಟ್ವಾಳ,ಡಿ 04 (MSP): ಪಾಣೆಮಂಗಳೂರಿನ ಮೆಲ್ಕಾರ್ ನ ಗುಡ್ಡೆಯಂಗಡಿ ಎಂಬಲ್ಲಿ ಡಿ.03 ರಂದು ರಾತ್ರಿ 8.20ರ ಸುಮಾರಿಗೆ ರಸ್ತೆ ದಾಟಲು ನಿಂತಿದ್ದ ಮಹಿಳೆಯೊಬ್ಬರಿಗೆ ಖಾಸಗಿ ಬಸ್ ವೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೆಲ್ಕಾರ್ ಸಮೀಪದ ಬೋಗೋಡಿ ನಿವಾಸಿ ಅತಾವುಲ್ಲಾ ಎಂಬವರ ಪತ್ನಿ ರುಕ್ಸಾನಾ (26) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಇವರು ಅಂಗಡಿಯಿಂದ ಸಾಮಾನು ಖರೀದಿಸಿ ರಸ್ತೆ ದಾಟುತ್ತಿದ್ದ ಸಂದರ್ಭ ರಸ್ತೆಯ ಇನ್ನೊಂದು ಬದಿಯಲ್ಲಿ ಗಂಡ ಮತ್ತು ಮಗು ನೋಡುತ್ತಿದ್ದಂತೆ ಅಪಘಾತ ಸಂಭವಿಸಿದೆ. ಘಟನೆ ನಡೆದ ತತ್ ಕ್ಷಣ ಬಸ್ಸನ್ನು ತೊರೆದು ಚಾಲಕ ಮತ್ತು ನಿರ್ವಾಹಕ ಪರಾರಿಯಾಗಿದ್ದಾರೆ.

ಖಾಯಂ ಸಂಚಾರ ನಡೆಸುತ್ತಿದ್ದ ಬಸ್ಸಿನ ಬದಲಿಗೆ ಈ ಬಸ್ ಸಂಚಾರ ನಡೆಸುತ್ತಿತ್ತು ಎನ್ನಲಾಗುತ್ತಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಕಳುಹಿಸಲಾಗಿದ್ದು ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬಂದೋಬಸ್ತ್ ಕ್ರಮ ಕೈಗೊಂಡಿದ್ದಾರೆ ತಿಳಿಸಿದ್ದಾರೆ. ಮೆಲ್ಕಾರ್ ಟ್ರಾಫಿಕ್ ಎಸ್ಸೈ ಮಂಜುಳಾ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.‌