News

ಬಿಜೆಪಿ ಪಡೆ ಮತಕ್ಕಾಗಿ ಶ್ರೀರಾಮನನ್ನು ಗಟ್ಟಿಯಾಗಿ ಹಿಡಿದುಕೊಂಡಿದೆ - ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಮಂಗಳೂರು, ಡಿ 04 (MSP): ರಾಜ್ಯದಲ್ಲಿ ನಾನು ಅಧಿಕಾರದಲ್ಲಿದ್ದಾಗ ಮುಸ್ಲಿಂ ಸಮುದಾಯದ ಅಭಿವೃದ್ದಿಗೆ 3,100 ಕೋಟಿ ಅನುದಾನ ಮೀಸಲಿಟ್ಟಿದ್ದೆ. ಈಗ ಒಂದು ವೇಳೆ ಮರಳಿ ಅಧಿಕಾರ ಬಂದರೆ ಅಲ್ಪಸಂಖ್ಯಾತರಿಗೆ 10,000 ಕೋಟಿ ಅನುದಾನ ಕೊಡುತ್ತಿದ್ದೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸೋಮವಾರ ನಡೆದ ಎಸ್‌ಎಸ್ಎಫ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದ ಸಂವಿಧಾನವು ಎಲ್ಲಾ ಧರ್ಮಗಳ ಸಾರ ಅದನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿದ್ದು, ಅದಕ್ಕೆ ಅವಕಾಶ ನೀಡಬಾರದು. ಸಂವಿಧಾನ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಿರಬೇಕು ಎಂದರು.

ಮನುಷ್ಯ ಮನುಷ್ಯನನ್ನ ದ್ವೇಷಿಸವಂತೆ ಯಾವ ಧರ್ಮದಲ್ಲೂ ಬೋಧಿಸಿಲ್ಲ. ಆದ್ರೆ ಕೆಲವರು ಸ್ವಾರ್ಥಕ್ಕೋಸ್ಕರ ಸಮಾಜವನ್ನು ವಿಭಜಿಸುತ್ತಾರೆ.ನಮ್ಮ ದೇಶದ ಸಂವಿಧಾನದಲ್ಲೂ ಸಹಬಾಳ್ವೆಯಿಂದ ಬದುಕಬೇಕು ಎನ್ನುವುದಿದೆ. ನಮ್ಮ ಸಂವಿಧಾನದ ಪ್ರಕಾರ ದೇಶದ ಸರ್ಕಾರ ನಡೆಯುತ್ತದೆ. ಇಲ್ಲಿ ಯಾರನ್ನು ಮತಗಳಿಗಾಗಿ ಓಲೈಸುವಂತಿಲ್ಲ ಎಂದರು

ನನ್ನ ಬಗ್ಗೆ ವಿವಿಧ ರೀತಿ ಅಪಪ್ರಚಾರ ಮಾಡಿದರೂ ಇದಕ್ಕೆ ಯಾವತ್ತೂ ಹೆದರಿಲ್ಲ, ಬಿಜೆಪಿ ಪಕ್ಷಕ್ಕೆ ಕಷ್ಟ ಬಂದಾಗ ರಾಮನ ಜಪ ಮಾಡುತ್ತಾರೆ. ಹೀಗಾಗಿ ಮತಗಳಿಕೆಯ ಸಂದರ್ಭದಲ್ಲಿ ರಾಮ ನೆನಪಾಗುತ್ತಾನೆ. ಅದ್ದರಿಂದ ಬಿಜೆಪಿ ಪಡೆ ಈಗ ರಾಮನನ್ನು ಗಟ್ಟಿಯಾಗಿ ಹಿಡಿದುಕೊಂಡಿದೆ ಎಂದು ವ್ಯಂಗ್ಯವಾಡಿದರು.