News

ಭಯ ಇರೋದ್ರಿಂದಲೇ ಬಿಜೆಪಿ ವಿರುದ್ಧ ಉಳಿದೆಲ್ಲ ಪಕ್ಷಗಳು ಒಗ್ಗೂಡುತ್ತಿವೆ - ಪ್ರತಾಪ್ ಸಿಂಹ ವ್ಯಂಗ್ಯ

ಮೈಸೂರು​, ನ17(SS): ಬಿಜೆಪಿ ಕುರಿತಾದ ಭಯ ಬೇರೆ ಪಕ್ಷಗಳಿಗೆ ಇದೆ. ಹೀಗಾಗಿ ಒಂದು ಪಕ್ಷದ ವಿರುದ್ಧ ಉಳಿದೆಲ್ಲ ಪಕ್ಷಗಳು ಒಗ್ಗೂಡುತ್ತಿವೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಂದಿನ 2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಬಿಜೆಪಿ ಕುರಿತಾದ ಭಯ ಬೇರೆ ಪಕ್ಷಗಳಿಗೆ ಇದೆ. ಹೀಗಾಗಿ ಒಂದು ಪಕ್ಷದ ವಿರುದ್ಧ ಉಳಿದೆಲ್ಲ ಪಕ್ಷಗಳು ಒಗ್ಗೂಡುತ್ತಿವೆ. ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಂಜನಗೂಡು, ಗುಂಡ್ಲುಪೇಟೆ ವಿಧಾಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆದರೆ ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನುಭವಿಸಿತು ಎಂದು ಹೇಳುವ ಮೂಲಕ ಉಪಚುನಾವಣೆ ಫಲಿತಾಂಶವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದವು. ಇದರಿಂದ ನಾನು ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡುವ ಅವಶ್ಯಕತೆ ಇರಲಿಲ್ಲ. ಹಾಗಾಗಿ ಗೈರಾಗಿದ್ದೆ ಎಂದು ತಿಳಿಸಿದ್ದಾರೆ.