News

ಕರಾವಳಿಯನ್ನು ಬಿಜೆಪಿ ಪಕ್ಷ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ – ಮಾಜಿ ಸಿಎಂ

ಬೆಂಗಳೂರು, ನ17(SS): ಕರ್ನಾಟಕದ ಕರಾವಳಿಯನ್ನು ಬಿಜೆಪಿ ಪಕ್ಷವು ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಆಕ್ರೋಶವ್ಯಕ್ತಪಡಿಸಿದ್ದಾರೆ.

ಟ್ವೀಟರ್‌ನಲ್ಲಿ “ಕರ್ನಾಟಕದ ಕರಾವಳಿಯನ್ನು ಬಿಜೆಪಿ ಪಕ್ಷವು ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ. ಹಾಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಕರ್ನಾಟಕದಲ್ಲಿಯೇ ಬಂದು ಮನೆ ಮಾಡಿದ್ರೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಜನ ಬೆಂಬಲ ನೀಡಲ್ಲ” ಎಂದು ತಿಳಿಸಿದ್ದಾರೆ.

ಇದಕ್ಕೆ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, “ಸಿದ್ದರಾಮಯ್ಯ ಅವರೇ ಅದೇ ರೆಕಾರ್ಡ್ ಕಂಠ ಪಾಠ ಮಾಡಿಕೊಂಡು ಎಷ್ಟು ದಿನ ಸುತ್ತಬೇಕು ಎಂದುಕೊಂಡಿದ್ದೀರಾ..? ಚಾಮುಂಡೇಶ್ವರಿಯ ಮತಾರರೇ ನಿಮ್ಮನ್ನು ನಂಬಲಿಲ್ಲ. ಇನ್ನು ಕರಾವಳಿ ಜನ ನಿಮ್ಮ ಕಂಠಪಾಠವನ್ನು ಒಪ್ಪುತ್ತಾರಾ, ಕರಾವಳಿ ಯಾಕೆ ಇಡೀ ಕರ್ನಾಟಕದ ಜನರಿಗೆ ತಮ್ಮ ಆಯ್ಕೆ ಗೊತ್ತಿದೆ ಇನ್ನು ಅಧಿಕಾರ ಹೊಂದಾಣಿಕೆ ನಿಮ್ಮ ಬಹುಮತಕ್ಕೆ ಬಂದದ್ದಲ್ಲ ನೆನಪಿರಲಿ” ಎಂದು ತಿಳಿಸಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಆರ್ ಎಸ್ ಎಸ್ ಬೈಠಕ್‌ನಲ್ಲಿ ಭಾಗವಹಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳೂರಿಗೆ ಆಗಮಿಸಿದ್ದರು. ನಗರದ ಸಂಘ ನಿಕೇತನದಲ್ಲಿ ಆರ್​ಎಸ್ಎಸ್​​ ನಾಯಕರ ಜೊತೆ ಅಮಿತ್ ​ಶಾ ಬೈಠಕ್​​​​ ನಡೆಸಿದ್ದರು.