News

ಮಂಗಳೂರು: ವಾಹನಕ್ಕೆ ಸೈಡ್ ಕೊಡುವ ವಿಚಾರ, ಇಬ್ಬರು ಟ್ಯಾಕ್ಸಿ ಚಾಲಕರಿಗೆ ಇರಿತ

ಮಂಗಳೂರು, ನ 08(SM): ಇಬ್ಬರು ಟ್ಯಾಕ್ಸಿ ಚಾಲಕರಿಗೆ ಚೂರಿಯಿಂದ ಇರಿದ ಘಟನೆ ಮಂಗಳೂರಿನ ಹೊರ ವಲಯದ ಬಜ್ಪೆಯ ಕಿನ್ನಿಪದವು ಎಂಬಲ್ಲಿ ನಡೆದಿದೆ. ಸರ್ಫ್ರಾಝ್(30) ಹಾಗೂ ಇಲ್ಯಾಸ್(40) ಹಲ್ಲೆಗೊಳಗಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಶೀದ್ ಮತ್ತು ತೌಸೀಫ್ ಪ್ರಕರಣದ ಆರೋಪಿಗಳು.

ಕಾರು ಹಾಗೂ ಬೈಕ್ ಸವಾರರ ನಡುವೆ ಸೈಡ್ ಕೊಡುವ ವಿಚಾರಕ್ಕೆ ಸಂಬಂಧಿಸಿ ವಾಗ್ವಾದ ನಡೆದಿದೆ. ಈ ಸಂದರ್ಭ ಅಲ್ಲೇ ಪಕ್ಕದ ಅಂಗಡಿಯಲ್ಲಿದ್ದ ಸರ್ಫ್ರಾಝ್ ಹಾಗೂ ಇಲ್ಯಾಸ್ ಜಗಳ ಬಿಡಿಸಲು ತೆರಳಿದ್ದಾರೆ. ಆ ಸಂದರ್ಭ ಕಾರಿನಲ್ಲಿದ್ದ ರಶೀದ್ ಹಾಗೂ ತೌಸೀಪ್ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಘಟನೆಯ ಕುರಿತಂತೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ನಿನ್ನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಡಿಗೆ ನಿರ್ವಹಿಸುವ ವಿಚಾರಕ್ಕೆ ಸಂಬಂಧಿಸಿ ಓಲಾ, ಉಬೇರ್ ಕಾರು ಚಾಲಕರ ಮೇಲೆ ಸ್ಥಳೀಯ ಕಾರು ಚಾಲಕರು ಬುಧವಾರ ಮಧ್ಯಾಹ್ನ ಹಲ್ಲೆ ನಡೆಸಿದ್ದರು. ವಿಮಾನ ನಿಲ್ದಾಣದ ಘರ್ಷಣೆಗೂ ಇಂದು ನಡೆದಂತಹ ಚೂರಿ ಇರಿತ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಿಂದ ಸ್ಪಷ್ಟನೆ ಲಭಿಸಿದೆ.