News

ಅನಂತಕುಮಾರ ಹೆಗಡೆ ನನ್ನ ರಾಜಕೀಯ ಗುರು - ಟಿಪ್ಪು ಜಯಂತಿಯನ್ನು ಬಹಿಷ್ಕರಿಸಿದ್ದೇನೆ - ಶಾಸಕ ಸುನಿಲ್ ನಾಯ್ಕ

ಭಟ್ಕಳ, ನ 08 (MSP): ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಬೇಡಿ ಎಂದು ದಕ್ಷಿಣ ಕನ್ನಡ ಬಿಜೆಪಿ ಶಾಸಕರು ಜಿಲ್ಲಾಧಿಕಾರಿಗೆ ಪತ್ರ ಬರೆದ ಬೆನ್ನಲ್ಲೇ ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರೂ ಕೂಡಾ ಟಿಪ್ಪು ಜಯಂತಿ ಬಹಿಷ್ಕಾರ ಹಾಕಿದ್ದಾರೆ.

ಮತಾಂಧ ದೊರೆ ಎಂದು ಪ್ರತೀತಿಯನ್ನು ಹೊಂದಿರುವ ಟಿಪ್ಪು ಸುಲ್ತಾನ್ ಜಯಂತಿಯನ್ನು ಬಹಿಷ್ಕರಿಸುವುದಾಗಿ ಶಾಸಕ ಸುನಿಲ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನನ್ನ ರಾಜಕೀಯ ಗುರುವಾಗಿದ್ದು, ಅವರ ರಾಷ್ಟ್ರೀಯವಾದ ಧೋರಣೆ ಮತ್ತು ಹಿಂದುತ್ವದ ಪರಿಕಲ್ಪನೆಯನ್ನು ಬೆಂಬಲಿಸಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳದೇ ಇರಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.

ಇದಲ್ಲದೆ ಹೈಕೋರ್ಟ್ ಕೂಡ ಟಿಪ್ಪು ಒಬ್ಬ ಸ್ವಾತಂತ್ರ ಹೋರಾಟಗಾರ ಅಲ್ಲ ಎಂದಿದೆ. ಹೀಗಿರುವಾಗ ರಾಜ್ಯ ಸರ್ಕಾರ ಕೇವಲ ಒಂದು ಸಮಾಜದ ಓಲೈಕೆಗಾಗಿ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ. ಇದಕ್ಕೆ ನನ್ನ ವಿರೋಧವಿದೆ ಎಂದು ಹೇಳಿರುವ ಅವರು ಶಿಷ್ಟಾಚಾರಕ್ಕೂ ತನ್ನ ಹೆಸರನ್ನು ಟಿಪ್ಪು ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಬಾರದು ಎಂದು ಶಾಸಕ ಸುನಿಲ್ ನಾಯ್ಕ ತಮ್ಮ ಕಾರ್ಯದರ್ಶಿ ಕರಿಯಪ್ಪ ನಾಯ್ಕ ಮೂಲಕ ತಹಸೀಲ್ದಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ.