News

ಅಮಾನುಷ ಕೃತ್ಯ - ಮೂರು ವರ್ಷದ ಬಾಲಕಿಯ ಬಾಯಿಯಲ್ಲಿ ಪಟಾಕಿ ತುರುಕಿ ಸ್ಫೋಟಿಸಿದ ಪುಂಡ ಯುವಕ

ಮೀರತ್‌, ನ 08 (MSP): ದೀಪಾವಳಿಯ ದಿನ ಅವಿವೇಕಿ ಯುವಕನೊಬ್ಬನ ಮೂರು ವರ್ಷದ ಬಾಲಕಿಯ ಬಾಯಿಯಲ್ಲಿ ಪಟಾಕಿ ಇರಿಸಿ ಸ್ಫೋಟಿಸಿದ ಅಮಾನುಷ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಸ್ಪೋಟದ ತೀವ್ರತೆಗೆ ಬಾಲಕಿಯ ಬಾಯಿ ಛಿದ್ರವಾಗಿದ್ದು, ಗಂಭೀರ ಗಾಯಗೊಂಡ ಆಕೆಯನ್ನು ತಕ್ಷಣ ಸ್ಥಳೀಯ ಆಸ್ಪತೆಗೆ ದಾಖಲಿಸಲಾಗಿದೆ.

ತನ್ನ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯ ಬಳಿ ತೆರಳಿದ್ದ ಕಿಡಿಗೇಡಿ ಯುವಕ ಸುಟ್ಲಿ ಬಾಂಬ್ ನ್ನು ಆಕೆಯ ಬಾಯಿಗೆ ತುರುಕಿ ಬೆಂಕಿ ಹಚ್ಚಿದ್ದಾನೆ. ಪರಿಣಾಮ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ.

ಮೀರತ್‌ನ ದೌರಾಲಾ ರಸ್ತೆಯಲ್ಲಿರುವ ಮಿಲಾಕ್‌ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿ ದುಷ್ಕರ್ಮಿ ತರುಣನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಬಾಲಕಿಯ ತಂದೆ ಶಶಿ ಕುಮಾರ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಗುವಿನ ಮೇಲೆ ಈ ಅಮಾನುಷ ಕ್ರೌರ್ಯ ನಡೆಸಿರುವ ಯುವಕ ಹರ್‌ಪಾಲ್‌ ಎಂದು ಆರೋಪಿಸಿದ್ದಾರೆ.

ಜೀವನ್ಮರಣದಲ್ಲಿ ಹೋರಾಡುತ್ತಿರುವ ಬಾಲಕಿಯ ಉಳಿವಿಗಾಗಿ ವೈದ್ಯರ ತಂಡ ಪ್ರಯತ್ನಿಸುತ್ತಿದ್ದು, ಆಕೆಯ ಬಾಯಿಗೆ 50 ಹೊಲಿಗೆಗಳನ್ನು ಹಾಕಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಫೋಟದ ಪರಿಣಾಮ ಬಾಲಕಿಯ ಗಂಟಲು ಭಾಗವೂ ಸುಟ್ಟು ಹೋಗಿದ್ದು ಆಕೆಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.