News

ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಹೆಸರಲ್ಲಿ ಉದ್ಯಮಿಗೆ ಬೆದರಿಕೆ

ಮಂಗಳೂರು,ನ 08 (MSP): ನಗರದ ಪ್ರಸಿದ್ಧ ಚಿನ್ನಾಭರಣ ಉಧ್ಯಮಿ ಹಾಗೂ ಅವರ ಪುತ್ರನಿಗೆ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಹಫ್ತಾಕ್ಕಾಗಿ ಬೆದರಿಕೆ ಕರೆ ಬರುತ್ತಿದ್ದು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್‌.ಎಲ್‌.ಶೇಟ್‌ ಜ್ಯುವೆಲ್ಲರ್ಸ್‌ ಮಾಲೀಕರಾಗಿರುವ ಉದ್ಯಮಿ ರವೀಂದ್ರ ಶೇಟ್‌ ಮತ್ತು ಅವರ ಮಗ ಶರತ್‌ ಶೇಟ್ ಅವರಿಗೆ ಈ ಕರೆ ಬಂದಿದ್ದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ರವೀಂದ್ರ ಶೇಟ್ ಅವರಿಗೆ ಅಕ್ಟೋಬರ್‌ 30ರಂದು ಸಂಜೆ 5 ಗಂಟೆಗೆ ದೂರವಾಣಿ ಕರೆ ಮಾಡಿದ್ದ ಆರೋಪಿ ಭೂಗತ ಪಾತಕಿ ರವಿ ಪೂಜಾರಿ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೆ ಮಗ ಶರತ್‌ ಶೇಟ್‌ ಬಗ್ಗೆ ಕೇಳಿದ್ದ. ನವೆಂಬರ್‌ 1ರ ಮಧ್ಯಾಹ್ನ 3.30 ಮತ್ತು 5ರ ಸಂಜೆ 4.30ಕ್ಕೆ ಮಗ ಶರತ್‌ಗೆ ಕರೆಮಾಡಿ ಬೆದರಿಕೆ ಹಾಕಿದ್ದಾನೆ. ಹಣ ಕೊಡಿ, ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಲು ಸಿದ್ದರಾಗಿ ಎಂದು ಜೀವ ಬೆದರಿಕೆ ಒಡ್ಡಿದ್ದಾನೆ’ ಎಂಬುದಾಗಿ ರವೀಂದ್ರ ಶೇಟ್‌ ದೂರಿನಲ್ಲಿ ತಿಳಿಸಿದ್ದಾರೆ.

ಕುಟುಂಬದ ಎಲ್ಲಾ ಸದಸ್ಯರ ಮೊಬೈಲ್‌ ನಂಬರುಗಳು ಹಾಗೂ ಅಂಗಡಿಯ ಸ್ಥಿರ ದೂರವಾಣಿ ಸಂಖ್ಯೆಗೆ ಕರೆಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾನೆ. ಜೀವ ಬೆದರಿಕೆಯನ್ನೂ ಒಡ್ಡುತ್ತಿದ್ದಾನೆ. ಇದರಿಂದ ನಮ್ಮ ಕುಟುಂಬ ಆತಂಕಕ್ಕೀಡಾಗಿದೆ. ಹೀಗಾಗಿ ಆರೋಪಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಹಿನ್ನಲೆಯಲಿ ಎಫ್‌ಐಆರ್ ದಾಖಲು ಮಾಡಿಕೊಂಡಿರುವ ಬರ್ಕೆ ಠಾಣೆ ಪೊಲೀಸರು, ತನಿಖೆ ಆರಂಭಿಸಿದ್ದಾರೆ.