News

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: 2 ವರ್ಷಗಳ ಬಳಿಕ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಜಾಮೀನು

ಉಡುಪಿ, ನ 08 (MSP): ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ 2 ವರ್ಷ 3 ತಿಂಗಳ ಕಾಲ ಜೈಲಿನಲ್ಲಿದ್ದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಅವರಿಗೆ ಕೊನೆಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

 

ವಿಡಿಯೊ ಕಾನ್ಫರೆನ್ಸ್‌ ಮೂಲಕ ಆರೋಪಿಗಳ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಅವರು , ಕೊಲೆಗೀಡಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ ಅವರಿಗೆ ಜಾಮೀನು ನೀಡಿದರು. 1 ಲಕ್ಷ ಬಾಂಡ್‌ ಹಾಗೂ ಆರೋಪಿ ತಂಗಿ ರೂಪಾ ಬಿ.ಶೆಟ್ಟಿ ಹಾಗೂ ಸಂಬಂಧಿ ಮಹಾಬಲ ಶೆಟ್ಟಿ ಅವರ ಶ್ಯೂರಿಟಿ ಆಧಾರದ ಮೇಲೆ ಜಾಮೀನು ಮಂಜೂರು ಮಾಡಲಾಗಿದೆ. ಮುಂದಿನ ವಿಚಾರಣೆಯನ್ನು ಫೆ.4ಕ್ಕೆ ಮುಂದೂಡಲಾಗಿದೆ.

ಪ್ರಕರಣದಲ್ಲಿ ಸಾಕ್ಷಿಗಳನ್ನು ಬೆದರಿಸುವಂತಿಲ್ಲ, ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು. ನ್ಯಾಯಾಲಯದ ಒಪ್ಪಿಗೆ ಪಡೆಯದೆ ದೇಶವನ್ನು ತೊರೆಯುವಂತಿಲ್ಲ. ಬಿಡುಗಡೆಯಾದ 10 ದಿನಗಳೊಳಗೆ ಪಾಸ್‌ಪೋರ್ಟ್‌ ಒಪ್ಪಿಸಬೇಕು. ಮೇಲಿನ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದು ಮಾಡುವುದಾಗಿ ನ್ಯಾಯಾಲಯ ಎಚ್ಚರಿಕೆ ನೀಡಿದೆ. ಹೀಗಾಗಿ 2-3 ದಿನಗಳಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.

2016 ಜುಲೈ 28ರಂದು ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ನಡೆದಿತ್ತು. ಅವರ ತಲೆಗೆ ಬಲವಾಗಿ ರಾಡ್‌ನಿಂದ ಹೊಡೆದು, ಶವವನ್ನು ಹೋಮಕುಂಡದಲ್ಲಿ ಸುಟ್ಟು ಹಾಕಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮಣಿಪಾಲ ಪೊಲೀಸರು ಪ್ರಮುಖ ಆರೋಪಿಗಳಾದ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಶೆಟ್ಟಿ, ನಂದಳಿಕೆಯ ನಿರಂಜನ್ ಭಟ್‌, ಶ್ರೀನಿವಾಸ ಭಟ್‌, ರಾಘವೇಂದ್ರ ಎಂಬುವವರನ್ನು ಬಂಧಿಸಿದ್ದರು.ಪ್ರಕರಣದಲ್ಲಿ ಜಾಮೀನು ಕೋರಿ ರಾಜೇಶ್ವರಿ ಅವರು ಹಲವು ಬಾರಿ ನ್ಯಾಯಾಲಯದ ಮೊರೆ ಹೋಗಿದ್ದರೂ ಜಾಮೀನು ಸಿಕ್ಕಿರಲಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ 6 ತಿಂಗಳೊಳಗೆ ಪ್ರಮುಖ ಸಾಕ್ಷ್ಯಗಳ ಹೇಳಿಕೆ ಪಡೆದುಕೊಂಡು, ರಾಜೇಶ್ವರಿ ಅವರಿಗೆ ಜಾಮೀನು ನೀಡುವಂತೆ ಜಿಲ್ಲಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.

ಅದರಂತೆ ಇದೇ ವರ್ಷದ ಜೂನ್‌ ಮೊದಲ ವಾರದಲ್ಲಿ ವಿಚಾರಣೆ ಆರಂಭಿಸಿದ್ದ ಜಿಲ್ಲಾ ನ್ಯಾಯಾಲಯ ಒಟ್ಟು 167 ಸಾಕ್ಷ್ಯಗಳಲ್ಲಿ 36 ಪ್ರಮುಖ ಸಾಕ್ಷ್ಯಗಳ ವಿಚಾರಣೆ ನಡೆಸಿ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು. ಬಳಿಕ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಈಗ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಇತರ ಆರೋಪಿಗಳಾದ ನವನೀತ್ ಶೆಟ್ಟಿ ಹಾಗೂ ನಂದಳಿಕೆಯ ನಿರಂಜನ ಭಟ್‌ಗೆ ಜಾಮೀನು ಸಿಗದೇ ಜೈಲಿನಲ್ಲಿಯೇ ಇದ್ದಾರೆ