News

ಪಡುಬಿದ್ರಿ: ಕಿರುಕುಳ ಆರೋಪದಲ್ಲಿ ಯುವತಿಯಿಂದ ಹಲ್ಲೆ- ರಿಕ್ಷಾ ಚಾಲಕ ಸಂಶಯಾಸ್ಪದ ಸಾವು

ಪಡುಬಿದ್ರಿ,ನ 08 (MSP):ಯುವತಿ ಹಾಗೂ ಆಕೆಯ ತಂದೆಯಿಂದ ಬುಧವಾರ ಹಲ್ಲೆಗೊಳಗಾದ ಮೂಲ್ಕಿಯ ರಿಕ್ಷಾ ಚಾಲಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮೊಬೈಲ್ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಬಗ್ಗೆ ಪಡುಬಿದ್ರಿ ದೀನ್ ಸ್ಟ್ರೀಟ್ ನಿವಾಸಿ ಯುವತಿ ಝೀನತ್ ಆಕೆಯ ತಂದೆ ಜತೆ ಸೇರಿ ರಿಕ್ಷಾ ಚಾಲಕ ದಿನೇಶ್ ಸನಿಲ್ ಮಾನಂಪಾಡಿ(45) ಅವರನ್ನು ಪಡುಬಿದ್ರಿಗೆ ಬುಧವಾರ ಕರೆಸಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ದೂರು ಕೊಡಲು ತೆರಳುವ ದಾರಿ ಮಧ್ಯೆ ದಿನೇಶ್ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಬಳಿಕ ದಿನೇಶ್ ಬೇರೆ ರಿಕ್ಷಾದಲ್ಲಿ ದೂರು ಕೊಡಲೆಂದು ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ ತನಗೆ ತಲೆ ಸುತ್ತು ಹಾಗೂ ಎದೆನೋವು ಬರುತ್ತಿರುವುದಾಗಿ ಹೇಳಿದ್ದರು. ಇದರಿಂದ ರಿಕ್ಷಾ ಚಾಲಕ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ದಿನೇಶ್ ಮೃತಪಟ್ಟಿದ್ದರು. ಪಡುಬಿದ್ರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆ ಬಳಿಕ ಠಾಣೆ ಮುಂಭಾಗ ಜಮಾಯಿಸ್ದ ಮೂಲ್ಕಿ ಮಾನಂಪಾಡಿ ರಿಕ್ಷಾ ಯೂನಿಯನ್ ಸದಸ್ಯರು ದಿನೇಶ್ ಅವರ ಕೊಲೆಯಾಗಿದ್ದು, ಕೊಲೆ ಪ್ರಕರಣದ ದಾಖಲಿಸಿಸುವಂತೆ ಒತ್ತಾಯಿಸಿದರು. ಈ ನಡುವೆ ಯುವತಿ ತನಗೂ ತಲೆ ಸುತ್ತಿದಂತಾಗುವುದಾಗಿ ಹೇಳಿದ್ದರಿಂದ ಆಕೆಯನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಣಿಪಾಲ ಆಸ್ಪತ್ರೆಗೆ ಮೃತದೇಹವನ್ನು ಶವ ಪರೀಕ್ಷೆ ಗೆ ಕಳುಹಿಸಿ ಕೊಡಲಾಗಿದ್ದು ಪೋಸ್ಟ್ ಮಾರ್ಟಮ್ ವರದಿ ಬಂದ ನಂತರವೇ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪಡುಬಿದ್ರೆ ಠಾಣಾ ಪೋಲಿಸರು ದಾಯ್ಜಿವರ್ಲ್ಡ್ ಗೆ ಮಾಹಿತಿ ನೀಡಿದ್ದಾರೆ.