News

ಕುಂದಾಪುರ: ವಿದ್ಯಾರ್ಥಿನಿಗೆ ವಾರ್ಡನ್ ನಿಂದ ಮತ್ತೆ ಕಿರುಕುಳ, ಮಹಿಳಾ ಸಾಂತ್ವಾನ ಕೇಂದ್ರದಿಂದ ಸಂಧಾನ

ಕುಂದಾಪುರ, ನ 07(SM): ಹಿರಿಯ ವಿದ್ಯಾರ್ಥಿನಿಗಳು ಹಾಗೂ ವಾರ್ಡನ್ ನಿಂದ ಹಲ್ಲೆಗೊಳಗಾದ ವಿದ್ಯಾರ್ಥಿನಿ ಪೊಲೀಸ್ ದೂರು ನೀಡಿದ ಕಾರಣಕ್ಕೆ ಹಾಸ್ಟೆಲ್ ವಾರ್ಡನ್ ಬುಧವಾರವೂ ದಿಗ್ಭಂದನ ವಿಧಿಸಿ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿನಿ ನೀಡಿದ ದೂರಿನಂತೆ ಪೊಲೀಸರು ಬುಧವಾರ ಕಾಲೇಜಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಇದರಿಂದ ಆಕ್ರೋಶಿತಗೊಂಡ ವಾರ್ಡನ್ ಬಲಾತ್ಕಾರದಿಂದ ಹಾಸ್ಟೆಲ್ ಬಿಡುವುದಾಗಿ ಪತ್ರವೊಂದನ್ನು ವಿದ್ಯಾರ್ಥಿನಿ ಕೈಯಿಂದ ಬರೆಸಿಕೊಂಡಿದ್ದಲ್ಲದೇ ದಿಗ್ಭಂದನ ವಿಧಿಸಿದ್ದಳೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಕುಂದಾಪುರದ ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷೆ ರಾಧಾದಾಸ್, ಕುಂದಾಪುರ ಪೊಲೀಸರ ಸಹಾಯದಿಂದ ಕಾಲೇಜಿಗೆ ತೆರಳಿದ್ದು ವಿದ್ಯಾರ್ಥಿನಿ ಪೋಷಕರಾದ ಮಾವ ಭಾಸ್ಕರ ಬಾಬು ಹಾಗೂ ತಾಯಿ ಲಕ್ಷ್ಮೀ ಚಂದ್ರಕಲಾ ಸಮ್ಮುಖದಲ್ಲಿ ಕಾಲೇಜಿನ ಚೇರ್ಮೆನ್ ಮಧುಸೂಧನ್ ಜೊತೆಗೆ ಮಾತುಕತೆ ನಡೆಸಿದರು. ಬಳಿಕ ವಿದ್ಯಾರ್ಥಿನಿ ಹೊರಗಡೆ ಪಿಜಿಯಲ್ಲಿದ್ದುಕೊಂಡು ಕಾಲೇಜು ವ್ಯಾಸಂಗ ಮುಂದುವರೆಸಲು ಒಪ್ಪಿಗೆ ಸೂಚಿಸಿದ್ದಾರೆ.