News

ಕುಂದಾಪುರ: 2ನೇ ಮದುವೆಯಾಗಿ ಪತ್ನಿಗೆ ಕಿರುಕುಳ, ಆರೋಪಿ ದೋಷಮುಕ್ತ

ಕುಂದಾಪುರ, ಅ 11(SM): ಎರಡನೇ ಮದುವೆಯಾಗಿದ್ದಲ್ಲದೆ, ಪತ್ನಿಗೆ ಹಿಂಸೆ ಹಾಗೂ ಪೀಡನೆ ನೀಡಿದ ಆರೋಪಿಯನ್ನು ಕುಂದಾಪುರ ನ್ಯಾಯಾಲಯ ದೋಷ ಮುಕ್ತಗೊಳಿಸಿದೆ. ಭಟ್ಕಳ ತಾಲೂಕಿನ ಮುರ್ಡೇಶ್ವರ ಮಾವಳ್ಳಿ-1ರ ನಿವಾಸಿ ಈಶ್ವರ ಹರಿಕಂತ್ರ ದೋಷಮುಕ್ತಿಗೊಂಡಾತ.

2009ರಲ್ಲಿ ಎರಡನೆಯ ಬಾರಿ ಮದುವೆಯಾಗಿದ್ದಲ್ಲದೇ 2ನೇ ಪತ್ನಿಗೆ ವರದಕ್ಷಿಣೆ ಪೀಡನೆ ಹಾಗೂ ವೈವಾಹಿಕ ಹಿಂಸೆ ನೀಡಿ ತವರಿಗೆ ಕಳುಹಿಸಿದ ಆರೋಪ ಈಶ್ವರನ ಮೇಲಿತ್ತು. ಅಲ್ಲದೆ ಆಕೆಯನ್ನು ಪ್ರತಿನಿತ್ಯ್ ಸತಾಯಿಸುತ್ತಿದ್ದ ಎನ್ನಲಾಗಿದೆ. ಆತನ ಪೀಡನೆ ತಾಳಲಾಗದ ಮೊದಲ ಪತ್ನಿ ತಾನೇ ಎದುರು ನಿಂತು ಮತ್ತೊಂದು ಹುಡುಗಿಯನ್ನು ಹುಡುಕಿ ಮದುವೆ ಮಾಡಿಸಿದ್ದಳು. ಆದರೆ ಆರೋಪಿಗೆ 2ನೇಯ ಹೆಂಡತಿಯಿಂದ ಮಕ್ಕಳಾಗದ ಕಾರಣ ಆಕೆಯ ಮೇಲೆ ಮುನಿಸಿಕೊಂಡಿದ್ದಾನೆ.

ಕೋಟ ಠಾಣೆಯ ಪೊಲೀಸರು ಆರೋಪಿಯ ವಿರುದ್ಧ ಚಾರ್ಜಶೀಟ್ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಕೋಟ ಉಪನೀರೀಕ್ಷಕರಾಗಿದ್ದ ಮಹೇಶ್ ಪ್ರಸಾದ್ ಸೇರಿ ಒಟ್ಟು 9 ಜನ ಸಾಕ್ಷ್ಯ ನುಡಿದಿದ್ದರು. ಮೊದಲನೇ ಪತ್ನಿ ಕೂಡ ಸಾಕ್ಷ್ಯ ಹೇಳಿದ್ದರು. ಕುಂದಾಪುರ ನ್ಯಾಯಾಲಯವು ಪ್ರಕರಣ ವಿಚಾರಣೆ ನಡೆಸಿದ್ದು, ಯಾವುದೇ ಸಾಕ್ಷಿಗಳು ಆರೋಪ ಸಾಬೀತುಪಡಿಸಲಾಗದ ಹಿನ್ನೆಲೆ ಆರೋಪಿಯನ್ನು ದೋಷಮುಕ್ತಿಗೊಳಿಸಿದೆ.

ಆರೋಪಿಯಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ವಾದಿಸಿದ್ದರು.