News

ಉಡುಪಿ: ಸಮಾರಂಭಗಳಲ್ಲಿ ಉಳಿದ ಆಹಾರ ಬಡವರಿಗೆ ತಲುಪಿಸುವ ನೂತನ ಸಂಸ್ಥೆ

ಉಡುಪಿ, ಅ 11(SM): ಸಭೆ, ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಬಡವರಿಗೆ ತಲುಪಿಸುವ ಉದ್ದೇಶದಿಂದ ಸಮಾನ ಮನಸ್ಕ ಯುವಕರು ಸೇರಿಕೊಂಡು ಸ್ಥಾಪಿಸಲಾದ 'ಉಡುಪಿ ಹೆಲ್ಪ್ ಲೈನ್' ಸ್ವಯಂ ಸೇವಾ ಸಂಸ್ಥೆ ನಗರದ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಗುರುವಾರ ಉದ್ಘಾಟನೆಗೊಂಡಿತು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಅವರು ಆಶ್ರಮಗಳಿಗೆ ಆಹಾರ ಪೂರೈಸುವ ವಾಹನದಲ್ಲಿ ಆಹಾರ ಪದಾರ್ಥಗಳ ಪಾತ್ರೆಗಳನ್ನು ಇಡುವ ಮೂಲಕ ಉಡುಪಿ ಹೆಲ್ಪ್ ಲೈನ್ ಸಂಸ್ಥೆಯನ್ನು ಅಧೀಕೃತವಾಗಿ‌ ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದಲ್ಲಿ‌ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಹಸಿವು ಮುಕ್ತ ಭಾರತ ಮಾಡುವ ಪ್ರಯತ್ನ ಇನ್ನು ಪೂರ್ಣಗೊಂಡಿಲ್ಲ. ದೇಶದಲ್ಲಿ ಇವತ್ತು ಕೆಲವು ಕಡೆಗಳಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಟ ನಡೆಸುತ್ತಿದ್ದಾರೆ. ಆದರೆ ಇನ್ನೊಂದೆಡೆ ಪ್ರತಿದಿನ ಶೇ. ೫೦ರಷ್ಟು ಬೇಯಿಸಿದ ಆಹಾರ ಪದಾರ್ಥಗಳು ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಉಡುಪಿ ಹೆಲ್ಪ್ ಲೈನ್ ಸಂಸ್ಥೆ ಸಭೆ, ಸಮಾರಂಭಗಳಲ್ಲಿ ಉಳಿಯುವ ಆಹಾರವನ್ನು ಆಶ್ರಮಗಳಿಗೆ, ಬಡವರಿಗೆ ತಲುಪಿಸುವ ಕಾರ್ಯ ಮಾಡಲು ಮುಂದಾಗಿರುವುದು ಶ್ಲಾಘನೀಯವಾದುದು ಎಂದರು.

ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಇಂದ್ರಾಳಿ ಜಯಕರ ಶೆಟ್ಟಿ ಮಾತನಾಡಿ, ಹಸಿದವರ ಹಸಿವು ನೀಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಾಗಾಗಿ ಸಮಾರಂಭಗಳಲ್ಲಿ ಉಳಿಯುವ ಆಹಾರಗಳನ್ನು ಹಾಳು ಮಾಡದೆ ಅದನ್ನು ಆಶ್ರಮ, ಬಡವರಿಗೆ ಹಂಚುವ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.