News

ನಾನು ಸಮಾಜಸೇವೆಗಳಲ್ಲ, ರಾಜಕಾರಣ ಮಾಡಲು ಬಂದಿದ್ದು - ಸಚಿವ ಅನಂತ್ ಕುಮಾರ್ ಹೆಗ್ಡೆ!

ಕಾರವಾರ,ಅ 11 (MSP): ಒಂದಲ್ಲ ಒಂದು ಹೇಳಿಕೆಯಿಂದ ವಿವಾದಗಳನ್ನು ತನ್ನ ಮೈಮೇಲೆ ಎಳೆದುಕೊಳ್ಳುವ ಕೇಂದ್ರ ಸಚಿವ ಸಚಿವ ಅನಂತ್ ಕುಮಾರ್ ಹೆಗ್ಡೆ ಮತ್ತೆ ಸುದ್ದಿಯಲ್ಲಿದ್ದಾರೆ. ರಾಜಕೀಯಕ್ಕೆ ನಾನು ಬಂದಿರೋದು ಸಮಾಜ ಸೇವೆ ಮಾಡಲು ಅಲ್ಲ ಎಂದು ಹೇಳಿ ನೆರೆದಿದ್ದವರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಶಿರಸಿಯಲ್ಲಿ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮತ ಚಲಾಯಿಸಿದ ಹಾಗೂ ಮತ ಕೊಡಿಸಿರತಕ್ಕಂತಹ ಯಾರೋ ಕೇಳಬಹುದು ನೀವು ರಾಜಕಾರಣ ಮಾಡ್ತೀರಾ ಎಂದು ಹೌದು ನಾವಿಲ್ಲಿಗ್ಯಾಕೆ ಬಂದಿರೋದು ರಾಜಕಾರಣ ಮಾಡಲೆಂದು ತಾನೆ. ನಾವು ಇರುವುದೇ ರಾಜಕಾರಣ ಮಾಡಲು. ಹಾಗಾಗಿಯೇ ತಾಲೂಕು ಅಧ್ಯಕ್ಷರಾಗಿದ್ದು. ಅದಕ್ಕಾಗಿಯೇ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದು. ಇದಲ್ಲದೆ ಜಿಲ್ಲಾ ಸಮಿತಿ ಸದಸ್ಯರೂ ಶಾಸಕರೂ ಆಗಿ ಈಗ ಸಂಸದರಾಗಿದ್ದೇವೆ. ನಮಗೆ ರಾಜಕಾರಣ ಬಿಟ್ಟು ಮತ್ತೇನೂ ಮಾಡೋದಿಕ್ಕೆ ಆಗೋದಿಲ್ಲ. ರಾಜಕೀಯಕ್ಕೆ ಬಂದು ರಾಜಕಾರಣವೇ ಮಾಡಬೇಕು .ರಾಜಕಾರಣ ಬಿಟ್ಟು ಬೇರೆನೂ ಬರೋದಿಲ್ಲ ಎಂದು ವಿವಾದಾತ್ಮಕ ಮಾತುಗಳನ್ನು ಆಡಿದರು.

ಇದಲ್ಲದೆ ನನ್ನ ಮಾತುಗಳನ್ನು ಮಾಧ್ಯಮದವರು ಹೇಗೆ ಬರೆಯುತ್ತಾರೆ ಎಂದು ಗೊತ್ತು. ಪತ್ರಕರ್ತರೂ ಹೇಗಾದರೂ ಬರೆದುಕೊಳ್ಳಿ. ಆದರೆ ನಾವು ರಾಜಕೀಯಕ್ಕೆ ಬಂದಿರೋದು ಸಮಾಜ ಸೇವೆ ಮಾಡಲು ಖಂಡಿತಾ ಅಲ್ಲ .ಈ ಕುರ್ಚಿಯಲ್ಲಿ ಕುಳಿತಿದ್ದು ಸಮಾಜ ಸೇವೆಗೆ ಅಲ್ಲ ಎಂದ ಅವರು ನನ್ನ ಮಾತುಗಳು ಅವರವರ ಭಾವಕ್ಕೆ ಅವರವರ ಭಕುತಿ ಗೆ ಬಿಟ್ಟ ವಿಚಾರ ಎಂದು ಹೇಳಿದರು.