News

ಮೂಡುಬಿದಿರೆ: ತಂದೆಯನ್ನು ಹತ್ಯೆಗೈದ ಮಗನಿಗೆ ಕಠಿಣ ಜೀವಾವಧಿ ಶಿಕ್ಷೆ, ದಂಡ ವಿಧಿಸಿ ಕೋರ್ಟ್ ಆದೇಶ

ಮಂಗಳೂರು,ಅ 11 (MSP): ಮೂಡುಬಿದಿರೆ ಹೊಸಬೆಟ್ಟು ಕರಿಂಗಾನ ನಿವಾಸಿ ಪೌಲ್ ಗೋವಿಯಸ್ ಎಂಬವರನ್ನು ಆಸ್ತಿ ವಿಚಾರಕ್ಕೆ ಸಂಬಂಧಿಸಿ ಹತ್ಯೆ ಗೈದ ಪುತ್ರ ಡಾಲ್ಫಿ ಗೋವಿಯಸ್ ಎಂಬವನ ವಿರುದ್ದ ಕೊಲೆ, ಕೊಲೆಯತ್ನ, ಸಾಕ್ಷ್ಯ ನಾಶ ಆರೋಪ ಸಾಬೀತಾಗಿದ್ದು ಕಠಿಣ ಜೀವಾವಧಿ ಶಿಕ್ಷೆ ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಶಿಕ್ಷೆ ಅಲ್ಲದೆ ಗಾಯಾಳು ಅಣ್ಣನಿಗೆ 50  ಸಾವಿರ ರೂ ಪರಿಹಾರವನ್ನು ಒಂದು ತಿಂಗಳ ಒಳಗೆ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ


ಘಟನೆಯ ವಿವರ: ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಆರೋಪಿ ಆಸ್ತಿಯ ವಿಚಾರದಲ್ಲಿ 2017ರ ಎಪ್ರಿಲ್ ತಿಂಗಳ 14 ರಂದು ಡಾಲ್ಪಿ ತಂದೆ ಮನೆಗೆ ಅಕ್ರಮ ಪ್ರವೇಶ ಮಾಡಿ ತಂದೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಅಲ್ಲದೆ ಸಹೋದರನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಎಸ್ ಐ ರಾಮಚಂದ್ರ ನಾಯಕ್ ತನಿಖೆ ಕೈಗೆತ್ತಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ 36 ಸಾಕ್ಷಿಗಳ ವಿಚಾರಣೆಯನ್ನು ನಡೆಸಲಾಗಿತ್ತು. ಸದ್ಯ ಆರೋಪಿಯ ಕೃತ್ಯವನ್ನು ನ್ಯಾಯಾಲಯ ಸಾಬೀತುಪಡಿಸಿದ್ದು, ಶಿಕ್ಷೆಯ ತೀರ್ಪನ್ನು ಪ್ರಕಟಿಸಿದೆ.

ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನಾಯ್ಯಾಧೀಶರಾದ ಕಡ್ಲೂರ್ ಸತ್ಯನಾರಾಯಣಾಚಾರ್ಯ ವಾದವನ್ನು ಆಲಿಸಿದ್ದು, ಸರ್ಕಾರದ ಪರವಾಗಿ ಪಬ್ಲಿಕ್ ಪ್ರಸಿಕ್ಯೂಟರ್ ಕೆ.ಪುಷ್ಪರಾಜ್ ಆಡ್ಯಂತಾಯ ವಾದ ಮಂಡಿಸಿದ್ದರು