News

ಮಿ ಟೂ ಅಭಿಯಾನ - ಲೈಂಗಿಕ ಕಿರುಕುಳ ಆರೋಪ - ಕ್ಷಮೆ ಕೇಳಿದ ರಘು ದೀಕ್ಷಿತ್

ಬೆಂಗಳೂರು,ಅ 11 (MSP): ಬಾಲಿವುಡ್ ನಟಿ ತನುಶ್ರಿ ದತ್ತ ಲೈಂಗಿಕ ಕಿರುಕುಳ ಆರೋಪದ ನಂತರ ಆರಂಭವಾದ ಮಿ ಟೂ ಅಭಿಯಾನ ಈಗ ಸ್ಯಾಂಡಲ್ ವುಡ್ ನಲ್ಲಿ ಕಿಡಿ ಹೊತ್ತಿಸಿದೆ. ತಮಿಳಿನ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಇಬ್ಬರು ಅನಾಮಿಕ ಮಹಿಳೆಯರು ರಘು ದೀಕ್ಷಿತ್ ವಿರುದ್ಧ ಮಾಡಿದ ಆರೋಪಗಳ ಎರಡು ಪತ್ರಗಳನ್ನು ಚಿನ್ಮಯಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅತೀ ಹೆಚ್ಚು ಲೈಂಗಿಕ ಕಿರುಕುಳ ನೀಡುವವರಲ್ಲಿ ಒಬ್ಬರು. ಹಲವು ವರ್ಷಗಳ ಹಿಂದೆ ಧ್ವನಿಮುದ್ರಣಕ್ಕಾಗಿ ಅವರ ಸ್ಟುಡಿಯೊಕ್ಕೆ ನನ್ನನ್ನು ಕರೆದಿದ್ದರು. ನಾನು ಹೋದಾಗ ಅಲ್ಲಿ ಅವರು ತಮ್ಮ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡತೊಡಗಿದರು (ಹೆಚ್ಚಿನ ವಿವಾಹಿತ ಗಂಡಸರು ಹೀಗೆ ಮಾಡುತ್ತಾರೆ). ಆದರೆ, ಅವರ ಹೆಂಡತಿ ಬಹಳ ಒಳ್ಳೆಯ ಮಹಿಳೆ. ‘ರೆಕಾರ್ಡಿಂಗ್ ಮುಗಿದ ಬಳಿಕ ಅವರು ನನ್ನನ್ನು ಹತ್ತಿರಕ್ಕೆ ಎಳೆದುಕೊಂಡರು. ಚೆಕ್‌ಗೆ ಸಹಿ ಮಾಡುವಾಗ ಮುತ್ತು ಕೊಡುವಂತೆ ಹೇಳಿದರು.ಬಳಿಕ ಬಾಗಿಲ ಬಳಿ ನನ್ನನ್ನು ಎತ್ತಿಕೊಳ್ಳಲು ಮುಂದಾದರು. ಇದರಿಂದ ಗಾಬರಿಯಾದ ನಾನು ಕಿರುಚುತ್ತಾ ಓಡಿದ್ದೆ' ಎಂದು ಆರೋಪಿಸಿದ್ದಾರೆ.

ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಟ್ವಿಟರ್ ನಲ್ಲಿಯೇ ಉತ್ತರಿಸಿರುವ ರಘು ದೀಕ್ಷಿತ್ ರೆಕಾರ್ಡಿಂಗ್ ಸಂದರ್ಭ ಈ ಘಟನೆ ನಡೆದಿದ್ದು ನಿಜ. ಆದೇ ದಿನ ನನ್ನ ತಪ್ಪಿನ ಅರಿವಾಗಿ ಆಕೆಯಲ್ಲಿ ಕ್ಷಮೆ ಕೋರಿದ್ದೆ. ಈಗ ಮತ್ತೆ ಕ್ಷಮೆ ಕೋರುತ್ತಿದ್ದೇನೆ ಎಂದಿದ್ದಾರೆ.