News

ಮೈಸೂರು: ಇನ್ಮುಂದೆ ಟಿಪ್ಪು ಜಯಂತಿ ಆಚರಿಸೋದು ಡೌಟ್...!

ಮೈಸೂರು, ಅ 10(SM): ಮಾಜಿ ಸಿಎಂ ಸಿದ್ದರಾಮಯ್ಯ ಜಾರಿಗೆ ತಂದ ಟಿಪ್ಪು ಜಯಂತಿಯನ್ನು ಸಿಎಂ ಕುಮಾರಸ್ವಾಮಿ ಸರಕಾರ ಮುಂದುವರಿಸುತ್ತಾ ಅಲ್ಲ ಕೈಬಿಡುತ್ತಾ ಎನ್ನುವ ವದಂತಿ ಆರಂಭಗೊಂಡಿದೆ. ಟಿಪ್ಪು ಜಯಂತಿಯನ್ನು ಕೈಬಿಡಬೇಕೆಂದು ಮೈಸೂರು ಸಂಸದ ಪ್ರತಾಪ್ ಸಿಂಹ ಸರಕಾರವನ್ನು ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಯಿಂದಲೇ ಟಿಪ್ಪು ಜಯಂತಿ ಮುಂದುವರೆಯುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿವೆ.ರಾಜ್ಯದಲ್ಲಿ ಶಾಂತಿ ಕದಡುವ ಯಾವುದೇ ಜಯಂತಿಯನ್ನು ಆಚರಿಸುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಈಗ ದಸರಾ ಸಂಭ್ರಮದ ನಡೆಯುತ್ತಿದೆ. ವಿವಾದಾತ್ಮಕ ವಿಚಾರಗಳ ಬಗ್ಗೆ ಏನನ್ನೂ ಹೇಳುವುದಿಲ್ಲ. ಮುಂದಿನ ದಿನಗಳಲ್ಲಿ ಜಯಂತಿ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಆದರೆ, ಸಿಎಂ ನೇರವಾಗಿ ಟಿಪ್ಪು ಜಂಯತಿ ಆಚರಣೆ ರದ್ದು ಪಡಿಸುವುದಾಗಿ ಹೇಳಿಕೆಯನ್ನು ನೀಡಿಲ್ಲ. ಬದಲಾಗಿ ಪರೋಕ್ಷವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪ್ರತಾಪ್ ಸಿಂಹ ಹೇಳಿದ್ದೇನು?

ಇನ್ನು ಚಾಮುಂಡಿ ಬೆಟ್ಟದಲ್ಲಿ ನಡೆದ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಮಹಿಷಾ ದಸರಾ ಆಚರಿಸುವುದನ್ನು ತಡೆಯಬೇಕು. ಇಂತಹ ಆಚರಣೆಯಿಂದಾಗಿ ನಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಇದರ ಜೊತೆಯಲ್ಲಿ ಮೈಸೂರು ಹಾಗೂ ರಾಜ್ಯದ ಜನತೆಗೆ ಈ ಹಿಂದೆ ಕಿರುಕುಳ ನೀಡಿದ ವ್ಯಕ್ತಿಯ ಜಯಂತಿ ಮಾಡುವುದನ್ನು ನಿಲ್ಲಿಸಿ ಎಂದು ಟಿಪ್ಪು ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ, ಟಿಪ್ಪು ಜಯಂತಿಯನ್ನು ರದ್ದು ಮಾಡಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದರು.

ಇನ್ನು ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 2015 ನವೆಂಬರ್ 10ರಂದು ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಿತು. ಅಷ್ಟೇ ಅಲ್ಲದೆ ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡಲು ಪ್ರತಿ ಜಿಲ್ಲೆಗೆ 50 ಸಾವಿರ ರೂ. ಹಾಗೂ ಪ್ರತಿ ತಾಲೂಕಿಗೆ 25 ಸಾವಿರ ರೂಪಾಯಿಗಳನ್ನು ನೀಡಿತ್ತು. ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ್ದವು. ಇದರ ಪರಿಣಾಮ ರಾಜ್ಯದ ಹಲವು ಕಡೆಗಳಲ್ಲಿ ಘರ್ಷಣೆಗಳೂ ಕೂಡ ನಡೆದಿದ್ದವು. ಅದರ ನಂತರದ ವರ್ಷಗಳಲ್ಲಿ ಸಿದ್ದರಾಮಯ್ಯ ಸರಕಾರ ಪೊಲೀಸ್ ಭದ್ರತೆಯೊಂದಿಗೆ ಟಿಪ್ಪುಜಯಂತಿಯನ್ನು ಆಚರಿಸಿಕೊಂಡು ಬಂದಿತ್ತು.