News

ಕಾಸರಗೋಡು: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ, ಕಾಸರಗೋಡಿನಲ್ಲಿ ರಸ್ತೆ ತಡೆ

ಕಾಸರಗೋಡು, ಅ 10(SM): ಕೇರಳದ ಪ್ರಸಿದ್ಧ ತೀರ್ಥಕ್ಷೇತ್ರ ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯೋಮಿತಿಯ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಕೇರಳ ಸರಕಾರದ ಧೋರಣೆಯನ್ನು ಪ್ರತಿಭಟಿಸಿ ಎಲ್ಲೆಡೆ ಹೋರಾಟ ತೀವ್ರಗೊಳ್ಳುತ್ತಿದೆ. ಬುಧವಾರದಂದು ಶಬರಿಮಲೆ ಅಯ್ಯಪ್ಪ ಕರ್ಮ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆ ಧರಣಿ ನಡೆಯಿತು. ಧರಣಿಗೆ ಕೈಜೋಡಿಸಿದ ಸಂಘ ಪರಿವಾರ ಹಾಗೂ ಹಿಂದೂ ಸಂಘಟನೆಗಳು ಕಾಸರಗೋಡಿನ ೫ ಕಡೆಗಳಲ್ಲಿ ರಸ್ತೆ ತಡೆ ನಡೆಸಿದರು.ಉಪ್ಪಳ ಅಂಚೆ ಕಚೇರಿ ಪರಿಸರದಿಂದ ಮೆರವಣಿಗೆ ಮೂಲಕ ಹೊರಟ ಕಾರ್ಯಕರ್ತರು ಉಪ್ಪಳ ಬಸ್ಸು ನಿಲ್ದಾಣ ಮುಂಭಾಗದ ರಾಷ್ಟೀಯ ಹೆದ್ದಾರಿಯಲ್ಲಿ ಧರಣಿ ಕುಳಿತು ರಸ್ತೆ ತಡೆ ನಡೆಸಿದರು. ಉಪ್ಪಳ, ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರ, ಕಾಞ೦ಗಾಡ್, ವೆಳ್ಳರಿಕುಂಡುವಿನಲ್ಲಿ ರಸ್ತೆ ತಡೆ ನಡೆಸಲಾಯಿತು. ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ ಪರಿಣಾಮ ಕಾಸರಗೋಡು-ಮಂಗಳೂರು ರಸ್ತೆ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಯಿತು. ಬಳಿಕ ಪೊಲೀಸರ ಸಮಾಕ್ಷಮ ರಸ್ತೆ ತಡೆಯಿಂದ ಪ್ರತಿಭಟನಾಕಾರರು ಹಿಂದೆ ಸರಿದರು.

ಇನ್ನು ಉಪ್ಪಳದಲ್ಲಿ ವೀರಪ್ಪ ಅಂಬಾರ್, ಕಾಸರಗೋಡಿನಲ್ಲಿ ಬಾಲಕೃಷ್ಣ ನಂಬ್ಯಾರ್, ಕಾಞಂಗಾಡ್ ನಲ್ಲಿ ನಾರಾಯಣ ಭಟ್ಟತ್ತಿರಿಪಾಡ್, ವೆಳ್ಳರಿಕುಂಡುವಿನಲ್ಲಿ ಗೋವಿಂದನ್ ಮಾಸ್ಟರ್ ಪ್ರತಿಭಟನೆಯನ್ನು ಉದ್ಘಾಟಿಸಿದರು.