News

ಕರಾವಳಿಯಲ್ಲಿ 'ತಿತ್ಲಿ' ಚಂಡಮಾರುತದ ಪ್ರಭಾವ - ರೌದ್ರಾವತಾರ ತಾಳಿದ ಕಡಲು -ಮನೆ, ರಸ್ತೆಗೆ ನುಗ್ಗಿದ ನೀರು

ಮಂಗಳೂರು,,ಅ 10 (MSP): ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕಾಣಿಸಿಕೊಂಡಿರುವ ತಿತ್ಲಿ ಚಂಡಮಾರುತ ಮತ್ತಷ್ಟು ತೀವ್ರಗೊಂಡಿದ್ದು, ಒಡಿಶಾ-ಆಂಧ್ರ ಪ್ರದೇಶ ಕರಾವಳಿಯತ್ತ ಸಾಗುತ್ತಿದೆ. ಇನ್ನೂ ತಿತ್ಲಿ ಚಂಡಮಾರುತದ ಪ್ರಭಾವ ಪಶ್ಚಿಮ ಕರಾವಳಿಯ ಮೇಲೂ ಆಗಿದ್ದು ಕಡಲು ಪ್ರಕ್ಷುಬ್ದಗೊಂಡಿದೆ.

ಬುಧವಾರ ಮುಂಜಾನೆಯಿಂದಲೇ ಜಿಲ್ಲೆಯಲ್ಲಿರುವ ಪಣಂಬೂರು, ಉಳ್ಳಾಲ, ಸೋಮೇಶ್ವರ-ಉಚ್ಚಿಲದ ಹಲವು ಕಡೆ ಸಮುದ್ರದ ಅಬ್ಬರ ಮಿತಿ ಮೀರಿದೆ. ಈ ಮುಂಚೆ ಎಂದೂ ಕಂಡರಿಯದಂತಹ ವಾತಾವರಣ ಕಡಲ ತೀರದಲ್ಲಿ ಕಂಡು ಬಂದಿದ್ದು ಸಮುದ್ರದ ರೌದ್ರ ನರ್ತನ ಹೆಚ್ಚಾಗಿದ್ದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ . ಇನ್ನೊಂದೆಡೆ ಕರಾವಳಿಯುದ್ದಕ್ಕೂ ಸಮುದ್ರದ ಆಳೆತ್ತರದ ಅಲೆಗಳು ತೀರ ಪ್ರದೇಶಕ್ಕೆ ನುಗ್ಗುತ್ತಿವೆ. ಮೀನುಗಾರರು ಭಯಭೀತಗೊಂಡು ಸಮುದ್ರಕ್ಕಿಳಿಯಲಿಲ್ಲ ಎಂದು ವರದಿಯಾಗಿದೆ.

ಕಡಲು ಪ್ರಕ್ಷುಬ್ದಗೊಂಡ ಹಿನ್ನಲೆಯಲ್ಲಿ ಪಣಂಬೂರು ಬೀಚ್‌ನಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ಹವಾಮಾನ ಇಲಾಖೆ ಸೂಚಿಸಿದೆ. ಇದೆಲ್ಲದರ ನಡುವೆ ಮತ್ತೆ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಂಭವವೂ ಇದೆ ಎನ್ನಲಾಗಿದೆ. ಅಕ್ಟೋಬರ್ 13ರವರೆಗೆ ಮೀನುಗಾರರು ಕಡಲಿಗಿಳಿಯದಂತೆ ಸೂಚನೆ ನೀಡಲಾಗಿದೆ.

ಇನ್ನೊಂದೆಡೆ ಸೋಮೇಶ್ವರ ಉಚ್ಚಿಲ ಸಮೀಪದ ಪೆರಿಬೈಲ್‌ನಲ್ಲಿ ಕಡಲಿನ ಅಲೆಗಳು ಸಮುದ್ರ ಪಕ್ಕದ ರಸ್ತೆಯನ್ನೂ ದಾಟಿ ಮುನ್ನುಗ್ಗಿವೆ. ಪರಿಣಾಮ ಸಮುದ್ರ

ಕಸಕಡ್ಡಿಗಳು ರಸ್ತೆಯಲ್ಲಿ ದಸ್ತಾನುಗೊಂಡಿದೆ. ಇದಲ್ಲದೆ ಸ್ಥಳೀಯವಾಗಿ ನಾಲ್ಕೈದು ಮನೆಯೊಳಗೆ ನೀರು ನುಗ್ಗಿದ್ದು ಬಾವಿ ನೀರು ಕೂಡಾ ಉಪ್ಪು ನೀರಾಗಿ ಪರಿವರ್ತನೆಗೊಂಡಿದೆ. ಈ ಅನಿರೀಕ್ಷಿತ ಘಟನೆಯಿಂದ ಸ್ಥಳೀಯರು ಆತಂಕಿತರಾಗಿದ್ದು, ಸೂಕ್ತ ಕ್ರಮಕ್ಕೆ ಸ್ಥಳೀಯರು ಮನವಿ ಮಾಡಿದ್ದಾರೆ.