News

ಮುಖ್ಯಮಂತ್ರಿ ಕುರ್ಚಿ ಹೋಗುತ್ತದೆ ಎಂಬ ಭಯ ನನಗಿಲ್ಲ - ಕುಮಾರಸ್ವಾಮಿ

ಚಿಕ್ಕಮಗಳೂರು, ಸೆ22(SS): ನನಗೇನೂ ಚೇರ್ ಹೋಗುತ್ತೆ ಅನ್ನುವ ಭಯವಿಲ್ಲ. ಈ ರಾಜ್ಯದಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ಈ ಮುಖ್ಯಮಂತ್ರಿ ಸ್ಥಾನ ಯಾರಿಗೂ ಶಾಶ್ವತವಲ್ಲ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ. 

ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಈ ರಾಜ್ಯದಲ್ಲಿ ಅನೇಕ ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದಲಾವಣೆಗಳು ಆಗುತ್ತಾ ಇರುತ್ತವೆ. ನನಗೇನೂ ಚೇರ್ ಹೋಗುತ್ತೆ ಅನ್ನೋ ಭಯವಿಲ್ಲ. ಈ ಮುಖ್ಯಮಂತ್ರಿ ಸ್ಥಾನ ಯಾರಿಗೂ ಶಾಶ್ವತವಲ್ಲ ಎಂದು ಹೇಳಿದರು.

ಈ ರಾಜ್ಯದಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ಎಷ್ಟು ಸರ್ಕಾರಗಳು ಬಂದು ಹೋದವು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದಲಾವಣೆಗಳು ಸಹಜ. ಹೀಗಾಗಿ ಇಲ್ಲಿ ಅದು ಮುಖ್ಯವಲ್ಲ. ಜನರ ಕಷ್ಟವನ್ನು ಆಲಿಸುವುದು ಮುಖ್ಯ ಎಂದು ತಿಳಿಸಿದರು.

ಮಾಧ್ಯಮದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನನಗೆ ಹಿಂಸೆ ಕೊಡಬೇಡಿ. ಯಾಕೆ ನನಗೆ ಇಷ್ಟೊಂದು ಪ್ರಶ್ನೆಗಳನ್ನು ಕೇಳುತ್ತೀರಿ..? ನನ್ನ ಕೆಲಸಕ್ಕೆ ಪ್ರಚಾರ ಕೊಡುತ್ತಿಲ್ಲ. ಅಧಿಕಾರ ಇಲ್ಲದಾಗ ಬಂದರೆ ಪ್ರಚಾರ ಕೊಡಲ್ಲ. ಅಧಿಕಾರ ಇದ್ದಾಗ ಬಂದ್ರೆ ಪ್ರಚಾರ ಕೊಡುತ್ತೀರಿ ಎಂದು ಬೇಸರ ವ್ಯಕ್ತಪಡಿಸಿದರು.

ಒಳ್ಳೆಯ ಕೆಲಸಕ್ಕೆ ಬೆಂಬಲ ಕೊಡಿ. ಅದು ಬಿಟ್ಟು ಇನ್ಯಾವುದೋ ವಿಚಾರಗಳಿಗೆ ಪ್ರಚಾರ ನೀಡುತ್ತೀರಿ. ಯಾಕೆ ನನಗೆ ಹಿಂಸೆ ಕೊಡುತ್ತೀರಿ ಎಂದು ಪ್ರಶ್ನಿಸಿದರು.