News

ಉಡುಪಿ: ‘ನಾಡಿನ ಜನರಿಗೆ ಬಿಜೆಪಿ ವಿರುದ್ದ ದಂಗೆ ಏಳಲು ಕರೆ ಕೊಡುತ್ತೇನೆ’-ಸಿಎಂ, ಉಡುಪಿಯಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಉಡುಪಿ, ಸೆ 21(SM):‘ನಾಡಿನ ಜನರಿಗೆ ಬಿಜೆಪಿ ವಿರುದ್ದ ದಂಗೆ ಏಳಲು ಕರೆ ಕೊಡುತ್ತೇನೆ’ ಎಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ರಾಜ್ಯದೆಲ್ಲೆಡೆ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಸಿಎಂ ವಿರುದ್ಧ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಸಿಎಂ ಹೇಳಿಕೆ ತೀವ್ರ ಆಕ್ಷೇಪಗಳು ಕೇಳಿ ಬರುತ್ತಿವೆ.


ಸಿಎಂ ಕುಮಾರಸ್ವಾಮಿ ಹೇಳಿಕೆಯನ್ನು ವಿರೋಧಿಸಿ ಇಂದು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. ಉಡುಪಿಯ ಕುಂಜಿಬೆಟ್ಟುವಿನ ಜಿಲ್ಲಾ ಬಿಜೆಪಿ ಕಚೇರಿಯ ಮುಂದೆ ಬಿಜೆಪಿ ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ದೋಸ್ತಿ ಸರಕಾರದ ಒಳಗಿನ ಕಚ್ಚಾಟದಿಂದ ಸಮಿಶ್ರ ಸರಕಾರ ಕುಸಿದು ಬೀಳುವ ಪರಿಸ್ಥಿತಿಯಲ್ಲಿದೆ. ಆದ್ರೆ ಸಿ ಎಂ ಕುಮಾರಸ್ವಾಮಿ ಸಮಿಶ್ರ ಸರಕಾರದ ಪತನವಾಗುವುದಕ್ಕೆ ಬಿಜೆಪಿ ಕಾರಣವಾಗುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರತಿಭಟನೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಮಟ್ಟಾರು ರತ್ನಾಕರ್ ಹೆಗ್ಡೆ, ಶ್ಯಾಮಲ ಕುಂದರ್, ಯಶ್ಪಾಲ್ ಸುವರ್ಣ ಮೊದಲಾದವರು ಪಾಲ್ಗೊಂಡಿದ್ದರು.