News

ಕ್ಲಬ್ ಲಾಕರ್ ನಲ್ಲಿ ಅಪಾರ ಆಸ್ತಿ ಪತ್ತೆ - ತನಿಖೆ ತೀವ್ರಗೊಳಿಸಿದ ಐಟಿ ಇಲಾಖೆ

ಬೆಂಗಳೂರು, ಜು 22 : ಬೆಂಗಳೂರಿನ ಬೌರಿಂಗ್ ಇನ್ಸ್‍ಸ್ಟಿಟ್ಯೂಟ್‍ನ ಮೂರು ಲಾಕರ್ ಗಳಲ್ಲಿ ದೊರಕಿದ 3.90 ಕೋಟಿ ರೂಪಾಯಿ ನಗದು, 7.90 ಕೋಟಿ ಮೌಲ್ಯದ ವಜ್ರಾಭರಣ, ಹಾಗೂ ಭಾರೀ ಬೆಲೆ ಬಾಳುವ ನೂರಾರು ಎಕರೆ ಜಮೀನಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಹಾಗೂ ಸಹಿ ಮಾಡಿದ ಖಾಲಿ ಚೆಕ್ ಗಳನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದ್ದು, ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಉದ್ಯಮಿ ಅವಿನಾಶ್ ಅಮರಲಾಲ್ ಅವರಿಗೆ ಸೇರಿದ ಆಸ್ತಿಯಾಗಿದ್ದು ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ದಾಖಲೆಗಳ ಪರಿಶೀಲನೆ ಚುರುಕುಗೊಳಿಸಿದ್ದಾರೆ. 

ಅವಿನಾಶ್ ಇನ್ನೂ ಕೆಲವು ಕ್ಲಬ್‍ಗಳಲ್ಲಿ ಸದಸ್ಯತ್ವ ಹೊಂದಿದ್ದು, ಅವುಗಳ ಮಾಹಿತಿಯನ್ನು ಕಲೆಹಾಕುತ್ತಿರುವ ಅಧಿಕಾರಿಗಳು, ಅವಿನಾಶ್ ಪತ್ತೆಗೆ ಬಲೆ ಬೀಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‍ಗಳಲ್ಲಿ ಅವಿನಾಶ್ ಸದಸ್ಯತ್ವ ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡಿರುವ ಅಧಿಕಾರಿಗಳು, ಇಂತಹ ಕ್ಲಬ್‍ಗಳ ಅಧಿಕಾರಿಗಳನ್ನು ಸಂಪರ್ಕಿಸಿ ಅವಿನಾಶ್ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.