News

ಬೆಳ್ತಂಗಡಿ: ವಸಂತ ಬಂಗೇರಗೆ ಸೋಲಿನ ಕಹಿ ಉಣಿಸಿದ ಹರೀಶ್ ಪೂಂಜಾ

ಬೆಳ್ತಂಗಡಿ, ಮೇ 15: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹರೀಶ್ ಪೂಂಜಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹರೀಶ್ ಪೂಂಜಾ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದರು. ಯುವ ಸಮೂಹದ ನೆಚ್ಚಿನ ನಾಯಕನಾಗಿ ಹೊರ ಹೊಮ್ಮುತ್ತಿರುವ ಹರೀಶ್ ಪೂಂಜಾ ಅವರಿಗೆ ಯುವಜನತೆಯ ಭರ್ಜರಿ ಬೆಂಬಲ ಸಿಕ್ಕಿತ್ತು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 13 ಚುನಾವಣೆಗಳಲ್ಲಿ ಕಾಂಗ್ರೆಸ್ ಬರೋಬ್ಬರೀ 8 ಬಾರಿ ಪ್ರಾಬಲ್ಯ ಸಾಧಿಸಿ ಅಧಿಕಾರ ಹಿಡಿದಿದ್ದರೆ, ಬಿಜೆಪಿ ಕೇವಲ ನಾಲ್ಕು ಬಾರಿ ಜಯ ಸಾಧಿಸಿತ್ತು. ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ವಸಂತ ಬಂಗೇರ ವಿರುದ್ಧ ಸ್ಪರ್ಧಿಸಿದ್ದ ಹರೀಶ್ ಪೂಂಜಾ, ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ವಿಜಯದ ನಗೆ ಬೀರಿದ್ದಾರೆ.ಹರೀಶ್ ಪೂಂಜಾ ಅವರು ಪಕ್ಷದ ಅಭ್ಯರ್ಥಿ ಆಗುವ ಮುನ್ನ ದಕ್ಷಿಣ ಕನ್ನಡ ಜಿಲ್ಲೆಯ ಯುವ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪಕ್ಷ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರಣ ಮತ್ತು ತಾಲೂಕಿನ ಜನ ಮಾತ್ರವಲ್ಲದೆ ಜಿಲ್ಲೆಯ ಜನರ ಹತ್ತಿರವಾಗಿದ್ದ ಯುವಕ ಹರೀಶ್ ಪೂಂಜಾ ಬಿಜೆಪಿಯ ಚಾಣಕ್ಯ ಅಮಿತ್ ಷಾ ಅವರ ಮನ ಗೆದ್ದಿದ್ದರು. ಇದರ ಫಲವಾಗಿಯೇ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಭಾಜಪಾದ ಅಭ್ಯರ್ಥಿಯಾಗಿ ಹರೀಶ್ ಪೂಂಜ ಗೆಲುವು ಸಾಧಿಸಿದ್ದಾರೆ.