News

ಬಡತನದಿಂದ ಬೆಳೆದು ಬಂದು ಅಪ್ರತಿಮ ಕಲಾವಿದ ಅರವಿಂದ ಬೋಳಾರ್

ಸುಪ್ರೀತಾ ಸಾಲ್ಯಾನ್, ಪಡು

ಈ ಕಲಾವಿದನಿಗೂ ರಂಗಭೂಮಿಗೂ ತೀರಾ ಹತ್ತಿರದ ನಂಟು. ಬಡತನದಲ್ಲಿ ಬೆಳೆದು ಬಂದ ಈ ಪ್ರತಿಭೆಗೆ ಉತ್ತಮ ಭವಿಷ್ಯ ನಿರ್ಮಿಸಿಕೊಟ್ಟಿದ್ದು ರಂಗಭೂಮಿ. ಇನ್ನು ಕರಾವಳಿಯಲ್ಲಿ ಇವರ ಹೆಸರನ್ನು ಕೇಳದೆ ಇರುವವರು ಬಹಳ ವಿರಳ. ತಮ್ಮ ಅದ್ಭುತವಾದ ನಟನೆಯ ಮೂಲಕ ಕಲಾಭಿಮಾನಿಗಳ ಮನಸ್ಸನ್ನು ಗೆದ್ದಿರುವ ಈ ರಿಯಲ್ ಸ್ಟಾರ್ ಮತ್ಯಾರು ಅಲ್ಲ, ಅರವಿಂದ್ ಬೋಳಾರ್.

ಮಂಗಳೂರು ಸಮೀಪದ ಬಜಾಲ್‌ನ ಕೃಷ್ಣಪ್ಪ ಮತ್ತು ಸುಂದರಿ ದಂಪತಿಯ ಪುತ್ರನಾದ ಇವರು ರಂಗಭೂಮಿಯಲ್ಲಿ ಉತ್ತಮ ಹಾಸ್ಯ ಕಲಾವಿದ. ಕಲಿತದ್ದು ಕೇವಲ ಆರನೇ ಕ್ಲಾಸು. ಆದರೆ ಕಲೆಯಲ್ಲಿ ವಿದ್ಯಾವಂತರು. ಹುಟ್ಟಿ ಬೆಳೆದದ್ದು ಬಡತನದಲ್ಲಿ. ಎಳೆಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಈ ಕಲಾವಿದನಿಗೆ ತಾಯಿಯೇ ಆಸರೆಯಾಗಿದ್ದರು. ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ಸಿಗೋ ಅಲ್ಪ ಸ್ವಲ್ಪ ಹಣದಲ್ಲಿ ಇವರ ತಾಯಿ ಕುಟುಂಬ ನಿರ್ವಹಿಸುತ್ತಿದ್ದರು. ಆಗ ಈ ಕಲಾವಿದನ ಕೈ ಹಿಡಿದದ್ದು ರಂಗಭೂಮಿ. ಚಿಕ್ಕಂದಿನಿಂದಲೇ ಕಲಾಮಾತೆ ಶಾರದೆಯ ಮಡಿಲಿನಲ್ಲಿ ಬೆಳೆದ ಇವರು ಇಂದು ಅದ್ಭುತ ಕಲಾವಿದ. ಕಲಾಕ್ಷೇತ್ರದ ಮೇಲೆ ಇವರು ಇಟ್ಟಿರುವ ಅಪಾರ ಗೌರವಕ್ಕೆ ಸಾಕ್ಷಿ ರಂಗದಲ್ಲಿ ಇಂದು ಇವರು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವುದು. ಯಾವುದೇ ನಟನೆಗೂ ಸೈ ಎನಿಸಿಕೊಳ್ಳುವ ಇವರು ಓರ್ವ ಶ್ರೇಷ್ಠ ಕಲಾವಿದ.

ಯಕ್ಷಗಾನ ಇವರ ಆಸಕ್ತಿಯ ಕ್ಷೇತ್ರ. ಯಕ್ಷರಂಗದಲ್ಲೂ ಗಮನಸೆಳೆದಿರುವ ಇವರು ಗುರುಗಳಾದ ಅಶೋಕ್ ಕೋಡಿಕಲ್ ಅವರಿಂದ ಕಲಾಧೀಕ್ಷೆ ಪಡೆದುಕೊಂಡರು. 10 ಕ್ಕಿಂತಲೂ ಮಿಕ್ಕಿ ಪ್ರಸಂಗಗಳಲ್ಲಿ ಅಭಿನಯಿಸಿರುವ ಇವರು ಮೊದಲು ಗೆಜ್ಜೆ ಕಟ್ಟಿ ರಂಗಸ್ಥಳದಲ್ಲಿ ಕುಣಿದಿದ್ದು ಕೃಷ್ಣಲೀಲೆ ಎಂಬ ಯಕ್ಷಗಾನಕ್ಕೆ. ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ ನಡೆಸಿ ಕಲಾಸೇವೆ ಸಲ್ಲಿಸಿರುವ ಇವರಿಗೆ ಬೆಂಗ್‌ದ ಮಂತ್ರವಾದಿ ಪ್ರಸಂಗ ಒಳ್ಳೆಯ ಹೆಸರು ತಂದು ಕೊಟ್ಟಿದೆ.

ಎಳೆಯ ವಯಸ್ಸಿನಲ್ಲಿ ಗುರುಗಳಾದ ರಾಘವ ಕೆ ಉಳ್ಳಾಲ್ ಅವರ ನೇತೃತ್ವದಲ್ಲಿ ರಂಗ ಪ್ರವೇಶಿಸಿದ ಇವರು ಮೊದಲು ಬಣ್ಣ ಹಚ್ಚಿದ್ದು ಬ್ರಹ್ಮನ ಬರವು ಎಂಬ ನಾಟಕಕ್ಕೆ. ಮುಂದೆ ದೇವದಾಸ್ ಕಾಪಿಕಡ್ ಅವರ ಶಿಷ್ಯರಾಗಿ ಪಳಗಿದ ಇವರಿಗೆ ಅವಕಾಶಗಳು ಹೆಚ್ಚುತ್ತಲೇ ಹೋಯಿತು. ವಿಜಯ್ ಕುಮಾರ್ ಕೊಡಿಯಾಲ್ ಬೈಲು ಅವರ ಗರಡಿಯಲ್ಲಿಯೂ ಸಾಕಷ್ಟು ಕಲಿತಿರುವ ಇವರಿಗೆ ಮಾಮು, ಪಾರ್ವತಿ, ಅಪ್ಪು, ಗಂಗಯ್ಯ ಮೇಸ್ತ್ರೀ, ಸೀತಾ ಟೀಚರ್ ನಾಟಕಗಳು ಹೆಸರು ತಂದು ಕೊಟ್ಟಿವೆ. ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಇವರು ಸ್ತ್ರೀ ಪಾತ್ರದಲ್ಲೂ ಮಿಂಚಿದ್ದಾರೆ.

ರಂಗಭೂಮಿಯಲ್ಲಿ ಸುಮಾರು 300 ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿ 10,000 ಕ್ಕಿಂತಲೂ ಮಿಕ್ಕಿ ಪ್ರದರ್ಶನ ನೀಡಿರುವ ಇವರು ತುಳು ಮತ್ತು ಕನ್ನಡ ಸೇರಿದಂತೆ ಐತಿಹಾಸಿಕ, ಸಾಮಾಜಿಕ ಮತ್ತು ಜಾನಪದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕದ ಉದ್ದಗಲಕ್ಕೂ ಸಂಚರಿಸುವ ಜೊತೆಗೆ ಹೊರ ರಾಷ್ಟ್ರಗಳಾದ ದುಬೈ, ಕತಾರ್, ಬಹ್ರೈನ್, ಮಸ್ಕತ್‌ಗಳಲ್ಲೂ ಅಭಿಮಾನಿ ಬಳಗವನ್ನು ಸೃಷ್ಟಿಸಿದ್ದಾರೆ ಈ ಕಲಾವಿದ.

ಸಿನಿಮಾದಲ್ಲೂ ಛಾಪು ಮೂಡಿಸಿರುವ ಇವರು ಒಂದೇ ಒಂದ್ಸಾರಿ ಎಂಬ ಕನ್ನಡ ಚಿತ್ರದ ಮೂಲಕ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟರು. ತುಳು ಚಿತ್ರರಂಗದಲ್ಲಿ 20 ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರಿಗೆ ಚಾಲಿಪೋಲಿಲು, ಚಂಡಿಕೋರಿ, ಎಕ್ಕಸಕ ಚಿತ್ರದ ಪಾತ್ರಗಳು ತೃಪ್ತಿ ತಂದಿವೆ.

ಕಲಾ ಜೀವನದಲ್ಲಿ ಸುಮಾರು 35 ವರ್ಷಕ್ಕಿಂತಲೂ ಹೆಚ್ಚು ಕಾಲ ಪಯಣ ಬೆಳೆಸಿರುವ ಇವರ ಬಣ್ಣದ ಲೋಕದ ಸಾಧನೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. 500 ಕ್ಕೂ ಹೆಚ್ಚು ಸನ್ಮಾನಗಳ ಜೊತೆಗೆ ಸಾಧನೆಯ ಸರದಾರ, ತುಳುವ ಮಾಣಿಕ್ಯ ಮುಂತಾದ ನಾಮ ಪುರಸ್ಕಾರಗಳು ಸಂದಿವೆ.