News

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ- ಕಾರ್ಕಳದಲ್ಲಿ ಭುಗಿಲೆದ್ದ ಅಸಮಾಧಾನ

ಮಂಗಳೂರು, ಏ 16 : ವಿಧಾನಸಭೆ ಚುನಾವಣೆಗೆ ಬಹು ನಿರೀಕ್ಷಿತ ಕಾಂಗ್ರೆಸ್‌ ಪಟ್ಟಿ ಬಿಡುಗಡೆಯಾಗಿದ್ದು, ಮೊದಲ ಹಂತದಲ್ಲಿ 218 ಕ್ಷೇತ್ರಗಳ ಹೆಸರು ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳಿಗೂ ಕಾಂಗ್ರೆಸ್ ಹಿಂದಿನ ಚುನಾವಣೆಯಲ್ಲಿ ಗೆದ್ದ ಹಾಗೂ ಸೋತ ಅಭ್ಯರ್ಥಿಗಳನ್ನು ಸೇರಿಸಿ ಮತ್ತೆ ಕಣಕ್ಕಿಳಿಸಿದೆ. ಮಂಗಳೂರು ಉತ್ತರ ದಕ್ಷಿಣ ಕೇತ್ರದಿಂದ ಶಾಸಕರದ ಜೆ.ಆರ್.ಲೋಬೊ, ಉತ್ತರ ಕ್ಷೇತ್ರದಿಂದ ಬಿ.ಎ.ಮೊಯ್ದಿನ್ ಬಾವ, ಮಂಗಳೂರು ಕ್ಷೇತ್ರದಿಂದ ಸಚಿವ ಯು.ಟಿ.ಖಾದರ್, ಮೂಡುಬಿದ್ರೆ ಕ್ಷೇತ್ರದಿಂದ ಅಭಯ ಚಂದ್ರ ಜೈನ್, ಬಂಟ್ವಾಳ ಕ್ಷೇತ್ರದಿಂದ ಸಚಿವ ರಮಾನಾಥ ರೈ, ಬೆಳ್ತಂಗಡಿ ಕ್ಷೇತ್ರದಿಂದ ವಸಂತ ಬಂಗೇರ ಹಾಗೂ ಪುತ್ತೂರು ಕ್ಷೇತ್ರದಿಂದ ಶಕುಂತಳಾ ಶೆಟ್ಟಿ ಹಾಗೂ ಸುಳ್ಯ ಕ್ಷೇತ್ರದಿಂದ ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಸೋತ ಡಾ. ರಘು ಅವರನ್ನು ಈ ಬಾರಿ ಕಾಂಗ್ರೆಸ್ ಮತ್ತೆ ಕಣಕ್ಕಿಳಿಸಿದೆ.

ಇನ್ನು ಉಡುಪಿಯ ಬೈಂದೂರು ಕ್ಷೇತ್ರದಿಂದ ಕೆ.ಗೋಪಾಲ ಪೂಜಾರಿ, ಕುಂದಾಪುರದಿಂಡ ರಾಕೇಶ್ ಮಲ್ಲಿ, ಉಡುಪಿ ಕ್ಷೇತ್ರದಿಂದ ಹಾಲಿ ಸಚಿವ ಪ್ರಮೋದ್ ಮಧ್ವರಾಜ್, ಕಾರ್ಕಳ ಕ್ಷೇತ್ರದಿಂದ ಕೆ.ಗೋಪಾಲ ಭಂಡಾರಿ ಹಾಗೂ ಕಾಪು ಕ್ಷೇತ್ರದಿಂದ ವಿನಯಕುಮಾರ್ ಸೊರಕೆಯವರಿಗೆ ಈ ಬಾರಿ ಹೈಕಮಾಂಡ್ ಮಣೆ ಹಾಕಿದೆ. 

ಇನ್ನೊಂದೆಡೆ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಕಾರ್ಕಳದಲ್ಲಿ ಭಿನ್ನ ಮತ ಸ್ಪೋಟಗೊಂಡಿದೆ. ಕಾರ್ಕಳದಲ್ಲಿ ಕೆ.ಗೋಪಾಲ ಭಂಡಾರಿ ಹೆಸರು ಫೈನಲ್ ಆಗುತ್ತಿದ್ದಂತೆ ಕಾರ್ಕಳ ಕ್ಷೇತ್ರದ ಮತ್ತೋರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಮುನಿಯಾಳು ಉದಯ್ ಶೆಟ್ಟಿ ಅಭಿಮಾನಿಗಳು ಮಾಜಿಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೀಗ ವೀರಪ್ಪ ಮೊಯ್ಲಿ ವಿರುದ್ದ ಉದಯ್ ಶೆಟ್ಟಿ ಅಭಿಮಾನಿಗಳು ಘೋಷಣೆ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗೂ ಇಂದು ಕಾರ್ಕಳ ತಾಲೂಕು ಕಚೇರಿ ಮುಂಭಾಗ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.