News

ಇರಾ: ನಿಶ್ಚಿತಾರ್ಥಕ್ಕೂ ನೀತಿಸಂಹಿತೆ ಬಿಸಿ - ಮನೆಯೊಡೆಯನ್ನು ಜೈಲಿಗಟ್ಟಿದ ಅಧಿಕಾರಿಗಳು

ಬಂಟ್ವಾಳ, ಎಪ್ರಿಲ್ 15 : ಮದುವೆ, ಹುಟ್ಟುಹಬ್ಬ ಆಚರಣೆ ಸಹಿತ ರಾಜಕೀಯ ಉದ್ದೇಶವಿಲ್ಲದ ಖಾಸಗಿ ಕಾರ್ಯಕ್ರಮಗಳಿಗೆ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದರೂ ಕೂಡಾ ಇತ್ತ ಕಡೆ ಮನೆಯಲ್ಲಿ ಖಾಸಗಿ ಕಾರ್ಯಕ್ರಮವನ್ನು ನಡೆಸುವವರು ಚುನಾವಣಾ ಅಧಿಕಾರಿಗಳಿಗೆ ನೀತಿ ಸಂಹಿತೆಗೆ ಹೆದರಿ ಬದುಕುವಂತಾಗಿದೆ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಏ ೧೫ರ ಶನಿವಾರ ಬಂಟ್ವಾಳ ತಾಲೂಕು ಇರಾ ಗ್ರಾಮದ ಮನೆ ಯೊಂದರಲ್ಲಿ ವಿವಾಹ ನಿಶ್ಚಿತಾರ್ಥ ನಡೆಯುತ್ತಿದ್ದ ಸಂದರ್ಭ ದಾಳಿ ನಡೆಸಿದ ಚುನಾವಣಾಧಿಕಾರಿಗಳು ಮದ್ಯ ಶೇಖರಣೆಯ ಹಿನ್ನೆಲೆಯಲ್ಲಿ ಮನೆಯೊಡೆಯನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇರಾ ಗ್ರಾಮದ ಸ್ಟೀವನ್ ಡಿ’ಸಿಲ್ವ ನ್ಯಾಯಾಂಗ ಬಂಧನಕ್ಕೆ ಒಳಗಾದವರು. 

ತನ್ನ ಅಣ್ಣನ ಪುತ್ರಿಯ ವಿವಾಹ ನಿಶ್ಚಿತಾರ್ಥ ಸ್ಟೀವನ್ ಡಿ’ಸಿಲ್ವ ಅವರ ಮನೆಯಲ್ಲಿ ನಿಗದಿಯಾಗಿದ್ದು, ಕಾರ್ಯಕ್ರಮ ನಡೆಯುತ್ತಿದ್ದಂತೆ ಅಬಕಾರಿ ದಳದ ಅಧಿಕಾರಿಗಳು ದಾಳಿ ಮಾಡಿ ಮದ್ಯ ಶೇಖರಣೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಸ್ಟೀವನ್‌ ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದರು.ನಂತರ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದಾಗ ನ್ಯಾಯಾಲಯ ಅವರಿಗೆ ಜಾಮೀನು ಕೂಡ ನಿರಾಕರಿಸಿದೆ. ಪರಿಣಾಮ ಅನಿವಾರ್ಯವಾಗಿ ಜೈಲು ಸೇರುವಂತಾಗಿದೆ. ಚುನಾವಣಾ ನೀತಿ ಸಂಹಿತೆ ಸಂದರ್ಭ ವಿವಾಹ ನಿಶ್ಚಿತಾರ್ಥ ಸಮಾರಂಭಕ್ಕೆ ಸಂಬಂಧಿಸಿ ಮನೆಯ ಯಜಮಾನ ಜೈಲಿಗೆ ಹೋಗಿರುವುದು ಜಿಲ್ಲೆಯಲ್ಲಿ ಇದೇ ಪ್ರಥಮ ಘಟನೆಯಾಗಿದೆ.