News

ಪ್ರಧಾನಿ ಮೋದಿ ವಿರುದ್ಧ ಹೇಳಿಕೆ – ರೈ ಕಾರಿಗೆ ಮುತ್ತಿಗೆ ಹಾಕಿದ ಆರ್.ಎಸ್.ಎಸ್ ಕಾರ್ಯಕರ್ತರು

ಕಲಬುರಗಿ, ಏ 13: ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ನಟ ಪ್ರಕಾಶ್ ರೈ ಕಾರಿಗೆ ಬಿಜೆಪಿ ಮತ್ತು ಆರ್‌ಎಸ್ಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಕೆಲ ದಿನದ ಹಿಂದೆ ರೈ, ಬಿಜೆಪಿ ಕ್ಯಾನ್ಸರ್‌ ಇದ್ದಂತೆ. ಅದಕ್ಕೆ ಮತ ಹಾಕಬೇಡಿ ಎಂದು ಬಿಜೆಪಿ ಪಕ್ಷವನ್ನು ಮತ್ತು ಪ್ರಧಾನಿ ಮೋದಿಯನ್ನು ಟೀಕಿಸಿದ್ದರು. ನಟ ಪ್ರಕಾಶ್‌ ರೈ ಅವರು ಮೋದಿ ವಿರುದ್ಧ ಪ್ರಚೋದನಕಾರಿಯಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಮತ್ತು ಆರ್‌ಎಸ್ಎಸ್ ಕಾರ್ಯಕರ್ತರು ರೈ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.  

ಡಾ. ಬಿ ಆರ್‌. ಅಂಬೇಡ್ಕರ್‌ ಜಯಂತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರೈ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ 20ಕ್ಕೂ ಅಧಿಕ ಕಾರ್ಯಕರ್ತರು ಗುಲ್ಬರ್ಗ ಕ್ಲಬ್‌ ಬಳಿ ರೈ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಈ ಪ್ರತಿಭಟನೆಯಿಂದ ರೈ ಮುಜುಗರಕ್ಕೆ ಒಳಗಾಗಿದ್ದು, ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ರೈ ಅವರಿಗೆ ರಕ್ಷಣೆ ನೀಡಲಾಗಿದೆ.

ಈ ವೇಳೆ ಬಿಜೆಪಿ ಮತ್ತು ಆರ್‌ಎಸ್ಎಸ್ ಕಾರ್ಯಕರ್ತರು ಮೋದಿ, ಮೋದಿ ಎಂದು ಘೋಷಣೆ ಕೂಗುವ ಮೂಲಕ ಪ್ರಕಾಶ್‌ ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.