News

ಕುಂದಾಪುರ: ಹಾಲಾಡಿಗೆ ಬಿಜೆಪಿ ಟಿಕೆಟ್‌ - ಅತೃಪ್ತಗೊಂಡ ಹಲವರಿಂದ ಹುದ್ದೆಗೆ ರಾಜೀನಾಮೆ

ಕುಂದಾಪುರ, ಏ 10 : ಭಾರತೀಯ ಜನತಾ ಪಕ್ಷ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನಗೊಂಡು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಕಿಶೋರ್ ಕುಮಾರ್ ಸಹಿತ ಆರು ಮಂದಿ ಪಕ್ಷದ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, 2013 ರ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ಕಿಶೋರ್ ಕುಮಾರ್, ಕೈಗಾರಿಕ ಪ್ರಕೋಷ್ಠದ ಸಹ ಸಂಚಾಲಕ ಸತೀಶ ಶೆಟ್ಟಿ ಮೆರ್ಡಿ, ಹಿಂದುಳಿದ ಮೋರ್ಛಾದ ಪ್ರಧಾನ ಕಾರ್ಯದರ್ಶಿ ವಿಠಲ ಪೂಜಾರಿ, ಹಿಂದುಳಿದ ಮೋರ್ಛಾದ ಖಜಾಂಚಿ ಶ್ರೀನಿವಾಸ ಕುಂದರ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರವೀಂದ್ರ ದೊಡ್ಮನೆ, ಹಿಂದುಳಿದ ಮೋರ್ಛಾ ವರ್ಗಗಳ ಸದಸ್ಯ ಚಂದ್ರಮೋಹನ ಪೂಜಾರಿ ಅವರುಗಳು ಏ.10 ರಂದು ಮಧ್ಯಾಹ್ನ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನಿವಾಸಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದರು.ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿ ಎರಡು ಬಣಗಳಾಗಿದ್ದು, ಕಿಶೋರ್ ಕುಮಾರ್, ರಾಜೇಶ ಕಾವೇರಿ ನೇತೃತ್ವದ ಬಣ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಟಿಕೆಟ್ ಕೊಡಬಾರದು ಎನ್ನುವ ವಾದವನ್ನು ಮುಂದಿಟ್ಟಿತ್ತು. ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅವರಿಗೆ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆ ಈ ಬಣದ್ದಾಗಿತ್ತು. ಆದರೆ ರಾಜ್ಯ ಬಿಜೆಪಿ ಇತ್ತೀಚೆಗೆ ಪುನಃ ಬಿಜೆಪಿ ಸೇರ್ಪಡೆಯಾದ ಹಾಲಾಡಿ ಶ್ರೀನಿವಾಸ ಶೆಟ್ಟರ ಹೆಸರನ್ನು ಅಂತಿಮಗೊಳಿಸಿತ್ತು. ಇದರಿಂದ ಆಕ್ರೋಶಗೊಂಡ ಬಿಜೆಪಿ ಇನ್ನೊಂದು ಬಣದ ಪ್ರಮುಖರು ರಾಜೀನಾಮೆಗೆ ಮುಂದಾಗಿದ್ದರು.

ಕುಂದಾಪುರ ಬಿಜೆಪಿ ಅಸಮಾದಾನ ಕಳೆದ ಒಂದುವರೆ ಎರಡು ವರ್ಷದಿಂದ ಭುಗಿಲೆದ್ದಿತ್ತು. ಪ್ರತ್ಯೇಕ ಸಭೆಗಳು ನಡೆಯುತ್ತಿದ್ದವು. ಬಣವನ್ನು ಸರಿ ಮಾಡುವ ಕೆಲಸ ಜಿಲ್ಲಾ ಬಿಜೆಪಿಯಿಂದಲೂ ಆಗಿರಲಿಲ್ಲ. ಬಿಜೆಪಿಗಾಗಿ ಕೆಲಸ ಮಾಡಿದವರಿಗೆ ಅನ್ಯಾಯವಾಗುತ್ತಿದೆ ಎನ್ನುವ ಕಿಶೋರ್ ಬಣ ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಂದರ್ಭ ತನ್ನ ಅಸಮಾಧಾನವನ್ನು ಬಹಿರಂಗಗೊಳಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಸಮ್ಮುಖದಲ್ಲಿ ಕುಂದಾಪುರ ಬಿಜೆಪಿ ಒಳಜಗಳ ಬಹಿರಂಗಗೊಂಡು ಮುಜುಗರಕ್ಕೆ ಒಳಗಾಗಿತ್ತು.

ಇತ್ತೀಚೆಗೆ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಟಿಕೆಟ್ ನೀಡಲಾಗುತ್ತಿದೆ ಎನ್ನುವಾಗ ಭಿನ್ನಾಭಿಪ್ರಾಯ ಇನ್ನಷ್ಟು ಜಾಸ್ತಿಯಾಗಿತ್ತು. ಮೋದಿಯಂಥಹ ನಾಯಕ ಕುಂದಾಪುರಕ್ಕೆ ಬೇಕು ಎನ್ನುವ ನಿಲುವನ್ನು ಎತ್ತಿ ಹಿಡಿಯುವ ಮೂಲಕ ಕಿಶೋರ್ ಬಣ ಕಳೆದ ೩ ತಿಂಗಳಿಂದ ಹಾಲಾಡಿಗೆ ಟಿಕೆಟ್ ನೀಡವುದನ್ನು ಪರೋಕ್ಷವಾಗಿ ವಿರೋಧಿಸಿತ್ತು. ಇತ್ತೀಚೆಗೆ ಬಿಜೆಪಿಗೆ ಬಂದ ಮಾಜಿ ಶಾಸಕ ಜಯಪ್ರಕಾಶ ಹೆಗ್ಡೆ ಕೂಡಾ ಈ ಬಣದಲ್ಲಿ ಗುರುತಿಸಿಕೊಂಡಿದ್ದರು. ಜಯಪ್ರಕಾಶ್ ಹೆಗ್ಡೆ ಕೂಡಾ ಟಿಕೆಟ್ ದೊರಕುತ್ತದೆ ಎಂದು ಕ್ಷೇತ್ರದಲ್ಲಿ ತಿರುಗಾಟ ಮಾಡಿದ್ದರು.

ಹಾಲಾಡಿ ವಿರೋಧಿ ಬಣದಲ್ಲಿ ಪ್ರಮುಖವಾಗಿ ರಾಜೇಶ ಕಾವೇರಿ ಗುರುತಿಸಿಕೊಂಡಿದ್ದು ಅವರನ್ನು ಈ ಹಿಂದೆಯೇ ಹಿಂದುಳಿದ ಮೋರ್ಚಾದ ಹುದ್ದೆಯಿಂದ ವಜಾ ಗೊಳಿಸಿತ್ತು. ಕಿಶೋರ್ ಕುಮಾರ್ ಮತ್ತು ರಾಜೇಶ ಕಾವೇರಿ ಇಬ್ಬರೂ ಕೂಡಾ ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಯುವ ನಾಯಕರು.