News

ಸುಳ್ಯ: ಡಿ.ವಿ. ಸದಾನಂದ ಗೌಡರು ಘೋಷಣೆ ಮಾಡಿದ ರಬ್ಬರ್ ಫ್ಯಾಕ್ಟರಿ ಎಲ್ಲಿದೆ ? ಕಾಂಗ್ರೆಸ್ಸಿಗರ ಪ್ರಶ್ನೆ

ಸುಳ್ಯ,ಏ: 'ರಾಜ್ಯದ ಮುಖ್ಯಮಂತ್ರಿ ಯಾಗಿದ್ದ ಸುಳ್ಯದ ಡಿ.ವಿ.ಸದಾನಂದ ಗೌಡರು ತೊಡಿಕಾನದಲ್ಲಿ ರಬ್ಬರ್ ಫ್ಯಾಕ್ಟರಿ ಮಾಡುತ್ತೇವೆಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆ ರಬ್ಬರ್ ಫ್ಯಾಕ್ಟರಿ ಎಲ್ಲಿದೆ? ಶಾಸಕ ಅಂಗಾರರು ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡುತ್ತೇವೆಂದೂ, ಭಾಗವಹಿಸಿದ ಕಾರ್ಯಕ್ರಮದಲ್ಲಿ 2  ಲಕ್ಷ ರೂ ನೀಡುತ್ತೇವೆ, 4ಲಕ್ಷ ರೂ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆಯೇ ಹೊರತು ಇದುವರೆಗೆ ಎಲ್ಲಿಯೂ ಅನುದಾನ ನೀಡಿಲ್ಲ' ಎಂದು ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ. 

ಅರಂತೋಡು ಜಿ.ಪಂ. ಕ್ಷೇತ್ರದ ಕಾಂಗ್ರೆಸ್ ನಾಯಕರಾದ ಸೋಮಶೇಖರ ಕೊಯಂಗಾಜೆ ಹಾಗೂ ಮಹಮ್ಮದ್ ಕುಂಞಿ ಗೂನಡ್ಕರವರು ಪತ್ರಿಕಾಗೋಷ್ಠಿ ನಡೆಸಿ ಅರಂತೋಡು ಜಿ.ಪಂ. ಕ್ಷೇತ್ರದಲ್ಲಿ ಶಾಸಕರ ವೈಫಲ್ಯಗಳು ಹಲವು ಇದೆ ಎಂದು ಪಟ್ಟಿಯನ್ನು ಮುಂದಿಟ್ಟರು.
“ಪೈಂಬೆಚ್ಚಾಲ್ ಎಸ್.ಸಿ. ಕಾಲೊನಿ ರಸ್ತೆಗೆ ರೂ.25 ಲಕ್ಷ ಅನುದಾನವನ್ನು ಕಾಂಗ್ರೆಸ್ ಸರಕಾರ ತಂದಾಗ ಅದರ ಕಾಮಗಾರಿಗೆ ಶಾಸಕರು ಅಡ್ಡಿ ಪಡಿಸಿದ್ದಾರೆ. ಕಲ್ಚೆರ್ಪೆ ಕಸ ವಿಲೇವಾರಿ ಸಮಸ್ಯೆಯನ್ನು ಅವರು ಇನ್ನೂ ನಿಭಾಯಿಸಿಲ್ಲ. ಅರಂಬೂರಿನಲ್ಲಿ ಸೇತುವೆ ನಿರ್ಮಾಣಕ್ಕೆ ನಾವು ಅನುದಾನ ತಂದಾಗ ಬಿಜೆಪಿಯವರು ಅದಕ್ಕೆ ಅಡ್ಡಿ ಪಡಿಸಿದ್ದಾರೆ. ತೊಡಿಕಾನ ಮತ್ಸ್ಯ ತೀರ್ಥ ಹೊಳೆಗೆ ಸೇತುವೆ ನಿರ್ಮಾಣ ಮಾಡುವಲ್ಲಿ ವಿಫಲರಾಗಿದ್ದಾರೆ. 4 ವರ್ಷಗಳ ಹಿಂದೆ ತೊಡಿಕಾನ ಅಂಗನವಾಡಿ ಕೇಂದ್ರಕ್ಕೆ ಗುದ್ದಲಿ ಪೂಜೆ ನೆರವೇರಿಸಿದರೂ ಹೊರತು ಕಾಮಗಾರಿ ಪೂರ್ಣಗೊಂಡಿಲ್ಲ. ಇಷ್ಟೇ ಅಲ್ಲದೆ ನೆಲ್ಲೂರು ಕೆಮ್ರಾಜೆ, ಆಲೆಟ್ಟಿ ಗ್ರಾಮದ ಕೆಲವು ಕಡೆ, ಉಬರಡ್ಕ ಮಿತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮರ್ಕಂಜದಲ್ಲಿಯೂ ಅಭಿವೃದ್ದಿ ಮಾಡಿಲ್ಲ. ಎಂದು ಹೇಳಿದರಲ್ಲದೆ , “ಸಿದ್ಧರಾಮಯ್ಯರ ನೇತೃತ್ವದ ಸರಕಾರ ಬಂದ ಮೇಲೆ ಬಡವರಿಗೆ ಸಾಕಷ್ಟು ಸೌಲಭ್ಯಗಳು ದೊರೆತಿದೆ“ ಎಂದು ಹೇಳಿದರು.

ಸಂಪಾಜೆ ಹಿ.ಪ್ರಾ.ಶಾಲೆ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕಟೀಲ್‌ರವರು ಭಾಗಿಯಾಗಿ ರೂ.5 ಲಕ್ಷದ ಘೋಷಣೆ ಮಾಡಿದ್ದರು. ಶಾಲಾ ಅಭಿವದೃದ್ಧಿಗೆ ಶಾಸಕ ಅಂಗಾರರು ರೂ.10 ಲಕ್ಷದ ಘೋಷಣೆ ಮಾಡಿದ್ದರು. ಸಂಪಾಜೆ ಸಹಕಾರ ಸಂಘದ ನೂತನ ಕಚೇರಿಯ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಶಾಸಕರು ಹಾಗೂ ಸಂಸದರು ತಲಾ ರೂ.2 ಲಕ್ಷದಂತೆ 4 ಲಕ್ಷ ಅನುದಾನ ಘೋಷಣೆ ಮಾಡಿದ್ದರು. ಅದೆಲ್ಲ ಎಲ್ಲಿದೆ ? ಎಂದು ಸೋಮಶೇಖರ್ ಪ್ರಶ್ನಿಸಿದರು.
ಗೌಡ ಸಮುದಾಯ ಭವನಕ್ಕೆ ಕಾಂಗ್ರೆಸ್ ಸರಕಾರ ಬಿಡುಗಡೆ ಮಾಡಿದ ಅನುದಾನ ಇನ್ನೂ ಬಾರದಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, 'ಈ ಹಿಂದೆ ಬಿಜೆಪಿ ಸರಕಾರ 1 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಅದರ ಪ್ರಥಮ ಕಂತು ಕೂಡಾ 12.5 ಲಕ್ಷ ಬಂದುದು. ಅದು ಹಂತ ಹಂತವಾಗಿ ಬರುತ್ತದೆ. ಆದರೆ ಬಿಜೆಪಿ ಸರಕಾರ ಬಿಡುಗಡೆ ಮಾಡಿದ 1 ಕೋಟಿ ಅನುದಾನವನ್ನು ಗೌಡ ಸಮುದಾಯ ಭವನಕ್ಕೆ ನೀಡಿದ್ದು ಮಾತ್ರ ಕಾಂಗ್ರೆಸ್ ಸರಕಾರ. ಈಗ ಕೂಡಾ 50 ಲಕ್ಷ ರೂ ನೀಡಿವೆ. ಅದರ ಪ್ರಥಮ ಕಂತು ಬಂದಿದೆ. ಉಳಿಕೆ ಅನುದಾನ ಇಲ್ಲಿಯ ಪ್ರಗತಿಯನ್ನು ನೋಡಿಕೊಂಡು ಕೊಡುತ್ತಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರ.ಕಾರ್ಯದರ್ಶಿಗಳಾದ ಶ್ರೀಹರಿ ಕುಕ್ಕುಡೇಲು, ಗೋಕುಲ್‌ದಾಸ್ ಕೆ, ಧರ್ಮಪಾಲ ಕೊಯಂಗಾಜೆ, ಪ್ರಮುಖರಾದ ಎಸ್.ಕೆ.ಹನೀಫ್, ಪ್ರಕಾಶ್ ಬಂಗ್ಲೆಗುಡ್ಡೆ, ಡಾ| ರಘು, ಅಶೋಕ್ ಚೂಂತಾರು, ಸಿದ್ದಿಕ್ ಕೊಕ್ಕೊ, ಸಚಿನ್ ಶೆಟ್ಟಿ ಪೆರುವಾಜೆ, ಜೂಲಿಯಾನ ಕ್ರಾಸ್ತ, ಗೀತಾ ಕೋಲ್ಚಾರ್, ಸತ್ಯ ಕುಮಾರ್ ಆಡಿಂಜ, ಶಾಫಿ ಕುತ್ತಮೊಟ್ಟೆ, ಲಕ್ಷ್ಮಣ ಶೆಣೈ, ಶಹೀದ್ ಪಾರೆ, ಭವಾನಿಶಂಕರ ಕಲ್ಮಡ್ಕ, ಉದಯ ಕುಮಾರ್ ಕುಕ್ಕುಡೇಲು, ಲಕ್ಷ್ಮೀ ಸುಬ್ರಹ್ಮಣ್ಯ, ಚಂದ್ರಕಾಂತ್ ನಾರ್ಕೋಡು, ಆನಂದ ಕೆಂಬಾರೆ, ವಿಶ್ವನಾಥ ಅಲೆಕ್ಕಾಡಿ, ನಾರಾಯಣ ಜಟ್ಟಿಪಳ್ಳ, ಅಚ್ಯುತ ಮಲ್ಕಜೆ ಇದ್ದರು.