News

ಪಡುಬಿದ್ರಿ: ವೇಗದೂತ ಬಸ್ಸುಗಳ ಪೈಪೋಟಿ - ಪ್ರಯಾಣಿಕರು ಆಸ್ಪತ್ರೆಗೆ ದಾಖಲು

 

ಪಡುಬಿದ್ರಿ, ಮಾ 12: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಜಮಾಡಿ ರಾ.ಹೆ. 66 ರ ಟೋಲ್ ಗೇಟ್ ಬಳಿ ಕಿರು ಸೇತುವೆ ಮೇಲೆ ನಿನ್ನೆ ತಡ ರಾತ್ರಿ ಮರದಕಟ್ಟಿಗೆ ತುಂಬಿದ ಲಾರಿಯೊಂದು ಟಯರ್ ಪಂಕ್ಚರ್ ಗೊಂಡು ನಿಂತಿತ್ತು. ಚಾಲಕ ಲಾರಿಯನ್ನು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದರ ಪರಿಣಾಮ ಉಡುಪಿಯಿಂದ ಮಂಗಳೂರು ಕಡೆಗೆ ಸಂಚರಿಸುವ ವೇಗಧೂತ ಬಸ್ಸೊಂದು ತನ್ನ ಮುಂದಿನ ಬಸ್ಸನ್ನು ಹಿಂದಿಕ್ಕುವ ರಭಸದಲ್ಲಿ ಲಾರಿಗೆ ಡಿಕ್ಕಿ ಹೊಡಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಹೊಳೆಗೆ ಬಿದ್ದು ಪಲ್ಟಿಯಾದ ಘಟನೆ ಮಾ 12 ರ ಸೋಮವಾರ ಮಧ್ಯಾಹ್ನ ಸಂಭವಿಸಿದೆ.  ಬಸ್ಸು ಹೊಳೆಗೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗೊಂಡಿದ್ದಾರೆ. ಸಾರ್ವಜನಿಕರು ಮತ್ತು ಪಡುಬಿದ್ರಿ ಪೋಲೀಸರ ಸಹಾಯದಿಂದ ಗಾಯಾಳುಗಳನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡುಬಿದ್ರಿ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.

 

 

 


ಈ ಪ್ರಕರಣದಿಂದ ಸ್ಥಳೀಯ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ದ.ಸಂ.ಸ ಮುಖಂಡ ಶೇಖರ್ ಹೆಜಮಾಡಿ ಮಾತನಾಡಿ ವೇಗಧೂತ ಬಸ್ಸುಗಳ ಪೈಪೋಟಿಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಯಾಗುತ್ತಿದೆ. ಕರ್ಕಶ ಹಾರ್ನ್ ಬಳಸಿ ಒವರ್ ಟೇಕ್ ಮಾಡುವ ರಭಸದಲ್ಲಿ ಪಾದಚಾರಿಗಳು ರಸ್ತೆ ನಡೆಯದಂತಾಗಿದೆ. ಬಸ್ಸು ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಡಳಿತ ಪೊಲೀಸ್ ವರಿಷ್ಟಾಧಿಕಾರಿ ಈ ಬಗ್ಗೆ ಗಮನ ಕೊಟ್ಟು ಇದಕ್ಕೆ ಶಾಶ್ವತ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.