News

ಥೇಣಿ: ಭೀಕರ ಕಾಡ್ಗಿಚ್ಚಿಗೆ 9 ವಿದ್ಯಾರ್ಥಿಗಳು ಸಜೀವ ದಹನ - ಮುಂದುವರಿದ ರಕ್ಷಣಾ ಕಾರ್ಯ

 

ಮಾ,12 : ತಮಿಳುನಾಡು ರಾಜ್ಯದ ಥೇಣಿ ಜಿಲ್ಲೆಯ ಕುರಂಕಣಿ ಬೆಟ್ಟಕ್ಕೆ ಟ್ರಕ್ಕಿಂಗ್ ಗೆ ತೆರಳಿದ್ದ 9 ವಿದ್ಯಾರ್ಥಿಗಳು ಕಾಡ್ಗಿಚ್ಚಿಗೆ ಬಲಿಯಾದ ಹೃದಯ ವಿದ್ರಾವಕ ಘಟನೆ ಮಾ 12 ರ ಸೋಮವಾರ ನಡೆದಿದೆ. ಇನ್ನು ಹಲವರನ್ನು ರಕ್ಷಣೆ ಮಾಡಲಾಗಿದೆ. ವಿದ್ಯಾರ್ಥಿಗಳೆಲ್ಲರೂ ಕೇರಳದ ಸೂರ್ಯನೆಲ್ಲಿ ಮೂಲದವರು.
ಕಾಡ್ಗಿಚ್ಚಿನಲ್ಲಿ ಸುಮಾರು 40 ಮಂದಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಇವರಲ್ಲಿ ಸುಮಾರು 15 ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದೆ. ರಕ್ಷಣಾ ಪ್ರಕ್ರಿಯೆಯಲ್ಲಿ ಭಾರತೀಯ ವಾಯುಪಡೆ ಭಾಗಿಯಾಗಿದ್ದು, ವೈಮಾನಿಕ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

ಅರಣ್ಯದಲ್ಲಿ ಬೆಂಕಿಯ ಕೆನ್ನಾಲಿಗೆ ಕಾಣಿಸಿಕೊಂಡ ಪರಿಣಾಮ ಪ್ರಾಣಾಪಾಯದಲ್ಲಿ ಸಿಲುಕಿದ್ದ ಹಲವರನ್ನು ರಕ್ಷಣಾ ಪಡೆಗಳು ರಕ್ಷಣೆ ಮಾಡಿದ್ದು, ಸುಟ್ಟ ಗಾಯಗಳಿಂದ ಬಳಲುತ್ತಿದ್ದ 10 ಮಂದಿಯನ್ನು ಮದುರೈ ಜಿಲ್ಲಾಸ್ಪತ್ರೆಗೆ , 8 ಮಂದಿಯನ್ನು ಮದುರೈ ಸರ್ಕಾರಿ ರಾಜಾಜಿ ಆಸ್ಪತ್ರೆಗೆ, ಮತ್ತಿಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಅರಣ್ಯದಲ್ಲಿ ಕಾಣಿಸಿಕೊಂಡಿರುವ ಬೆಂಕಿಯನ್ನು ನಿಯಂತ್ರಿಸಲು, ಅರಣ್ಯಕ್ಕೆ ರಾಸಾಯನಿಕ ಪುಡಿ ಹಾಕಲಾಗುತ್ತಿದ್ದು ಇವಿಷ್ಟೇ ಅಲ್ಲದೆ ಇತರ ನಿಯಂತ್ರಕ ಕ್ರಮಗಳನ್ನು ಮುಂದುವರಿಸಲಾಗಿದೆ.