News

ಬಿಜೆಪಿಯ ರವಿಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ- ಸಚಿವ ಯು.ಟಿ ಖಾದರ್

ಮಂಗಳೂರು, ಮಾ 11 : ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ತಮ್ಮ ಬುದ್ದಿ ಸ್ಥಿಮಿತ ಕಳೆದುಕೊಂಡು ಅವಿವೇಕಿಯಂತೆ ವರ್ತಿಸುತ್ತಿದ್ದಾರೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ ಖಾದರ್ ಹೇಳಿದ್ದಾರೆ. 

ಮಾ 11 ಭಾನುವಾರ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು , ಸಚಿವ ರೈ ಹಾಗೂ ಖಾದರ್ ಭಯೋತ್ಪಾದಕರು ಎಂದ ರವಿಕುಮಾರ್ ಮಾತಿಗೆ ತಿರುಗೇಟು ನೀಡಿದ್ದಾರೆ.
ರವಿ ಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಅಂತವರ ಮಾತಿಗೆ ನಾವು ಮಹತ್ವ ನೀಡುವುದಿಲ್ಲ. ಬಿಜೆಪಿಗರು ಅಧಿಕಾರಕ್ಕಾಗಿ ಯಾವ ಕೆಳಮಟ್ಟಕ್ಕೂ ಹೋಗಲು ಸಿದ್ದರಿರುತ್ತಾರೆ. ಪ್ರತ್ಯೇಕವಾದಿಗಳಾಗಿರುವ ಪಿಡಿಪಿ ಜತೆ ಕಾಶ್ಮೀರದಲ್ಲಿ ಅಧಿಕಾರ ನಡೆಸುವ ಇವರು ಎಂಥವರು ಎಂದು ಪ್ರಶ್ನಿಸಿದರು. ಭಾರತವನ್ನು ವಿರೋಧಿಸುವ ಪ್ರತ್ಯೇಕವಾದಿಗಳಿಗೆ ಬಿಜೆಪಿಯ ಬೆಂಬಲವಿದೆ ನ್ಯಾಗಲ್ಯಾಂಡ್ ತ್ರಿಪುರದಲ್ಲೂ ಪ್ರತ್ಯೇಕವಾದಿಗಳನ್ನು ಬೆಂಬಲಿಸಿದ್ದಾರೆ. ಜತೆಗೆ ಮತಕ್ಕಾಗಿ ಸಮಾಜವನ್ನು ವಿಭಾಗಿಸುವುದು ಇವರ ತಂತ್ರ ಎಂದು ಖಾದರ್ ಕಿಡಿಕಾರಿದರು.
ಚುನಾವಣೆ ಸಮೀಪದಲ್ಲಿರುವುದರಿಂದ ಮಾನಸಿಕ ರೋಗ ಬರುವ ಕಾಲ ಇದು. ಜನಸಾಮಾನ್ಯರ ನೆಮ್ಮದಿ ಕೆಡಿಸುವ ಯಾವ ಕೆಲಸವಾಗಬಾರದೆಂದು ಸೋದರನಾಗಿ , ರವಿಕುಮಾರ್ ಅವರಿಗೆ ಬುದ್ದಿ ಹೇಳುತ್ತಿದ್ದೇನೆ ಎಂದು ತಿಳಿಸಿದರು.