News

ಆಂದ್ರ ಪ್ರದೇಶದಲ್ಲಿ ರಸ್ತೆ ಅಪಘಾತ- ಕಾಸರಗೋಡಿನ ನಾಲ್ವರ ದಾರುಣ ಸಾವು

ಚಿತ್ತೂರು, ಮಾ : ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ಭಾನುವಾರ ಮುಂಜಾನೆ ಸುಮಾರು 3.30 ಕ್ಕೆ ಕೋಲಾರದ ಗಡಿ ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಮೃತರೆಲ್ಲರೂ ಕೇರಳದ ಕಾಸರಗೋಡು ಜಿಲ್ಲೆಯವರಾಗಿದ್ದಾರೆ. 


ಮೃತರನ್ನು ಕಾಸರಗೋಡು ಮೂಲದ ಕುಂಬಳೆಯ ನಾಯ್ಕಪಿನವರಾದ ಪಕೀರ ಗಟ್ಟಿ, ಸಹೋದರ ಮಂಜಪ್ಪ ಗಟ್ಟಿ, ಮಂಜಪ್ಪ ಗಟ್ಟಿ ಪತ್ನಿ ಸುಂದರಿ ಎಂದು ಗುರುತಿಸಲಾಗಿದೆ. ಕ್ಸೈಲೋ ಕಾರು ಕೇರಳದ ಕಾಸರಗೋಡು ನಿಂದ ತಿರುಪತಿ ತಿಮ್ಮಪ್ಪ ನ ದರ್ಶನಕ್ಕೆ ತೆರಳುತ್ತಿತ್ತು. ಈ ವೇಳೆ ಎಸ್.ಆರ್.ಎಸ್ ಖಾಸಗಿ ಬಸ್, ಕಂಟೈನರ್ ವಾಹನವನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ 5 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಬಂಗಾರುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಸಂಬಂಧ ಬಂಗಾರುಪಾಳ್ಯಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.