News

ಬಂಟ್ವಾಳ: ಮತದಾರರ ಪಟ್ಟಿಯಲ್ಲಿ ಕಾಣೆಯಾಗಿದೆ ಪುರಸಭೆಯ ಮಾಜಿ ಅಧ್ಯಕ್ಷರ ಹೆಸರು

ಬಂಟ್ವಾಳ, ಮಾ 10: ಚುನಾವಣಾ ಶಾಖೆಯ ಅಧಿಕಾರಿಗಳ ಎಡವಟ್ಟಿನಿಂದ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷರೊಬ್ಬರ ಹೆಸರು ಮತದಾರರ ಪಟ್ಟಿಯಿಂದ ಕಾಣೆಯಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಬಂಟ್ವಾಳ ಕ್ಷೇತ್ರ ಬಿಜೆಪಿಯ ಕೋಶಾಧಿಕಾರಿ, ಮಾಜಿ ಪುರಸಭಾಧ್ಯಕ್ಷ ದಿನೇಶ್ ಭಂಡಾರಿ ಅವರ ಹೆಸರು ಬಿಡುಗಡೆಯಾದ ಮತದಾರರ‌ ಪಟ್ಟಿಯಿಂದ ಡಿಲಿಟ್ ಆಗಿದೆ. ಮಾತ್ರವಲ್ಲದೆ, ಬಿಜೆಪಿ ಕಾರ್ಯಕರ್ತ ಗುರುದತ್ತ ಎಂಬವರ ಸಹಿತ ಹಲವು ಮಂದಿಯ ಹೆಸರು ಕಾಣೆಯಾಗಿರುವುದು ಹೊಸ ವಿವಾದವೊಂದನ್ನು ಹುಟ್ಟು ಹಾಕಿದೆ.

ಬಿಜೆಪಿ ಮಖಂಡರಿಗೆ ವಿತರಿಸಲಾದ ಮತದಾರರ ಪಟ್ಟಿಯಲ್ಲಿ ಪ್ರಮುಖವಾಗಿ ಇವರಿಬ್ಬರ ಸಹಿತ ಹಲವರ ಹೆಸರು ಮತದಾರರ ಪಟ್ಟಿಯಿಂದ ಕಾಣೆಯಾಗಿರುವುದು ಅಚ್ಚರಿಯನ್ನುಂಟು ಮಾಡಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಇನ್ನು ಕೂಡ ಅವಕಾಶವಿದ್ದರೂ ಯಾವುದೇ ಕಾರಣವಿಲ್ಲದೆ ಏಕಾಏಕಿಯಾಗಿ ಹೆಸರನ್ನು ಅಳಿಸಿಹಾಕಿರುವ ಸಂಗತಿ ಸಂಬಂಧಿಸಿದ ಇಲಾಖಾಧಿಕಾರಿಗಳ ಮೇಲೆ ಅನುಮಾನ ಹುಟ್ಟುಹಾಕಿದೆ. ಕಾಣದ ಕೈಗಳು‌ ಇದರ ಹಿಂದೆ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ.   

ಮತದಾರರ ಪಟ್ಟಯಿಂದ ಮತದಾರನೊಬ್ಬನ ಹೆಸರು ಡಿಲಿ‌‌ಟ್ ಮಾಡಬೇಕಾದರೆ ಅಥವಾ ಸೇರ್ಪಡೆಗೊಳಿಸಬೇಕಾದರೆ ಬಿ.ಎಲ್.ಒ ಮೂಲಕವೇ ಹೋಗಬೇಕಾಗುತ್ತದೆ. ಆದರೆ ಇವರ ಗಮನಕ್ಕೆ ಬಾರದೆ ದಿನೇಶ್ ಭಂಡಾರಿ ಹಾಗೂ ಗುರುದತ್ತ ಅವರ ಹೆಸರನ್ನು ಅಳಿಸಿ ಹಾಕಲಾಗಿದೆ. ಬಂಟ್ವಾಳ ಕಸ್ಬಾ ಗ್ರಾಮದ ವಾಡ್೯ ನಂಬರ್ 5 ರ ವ್ಯಾಪ್ತಿಗೊಳಪಟ್ಟಿರುವ ಇವರಿಬ್ಬರು ದಿನೇಶ ಭಂಡಾರಿ ಮತಗಟ್ಟೆ ಸಂಖ್ಯೆ 65 ಕ್ರಮ ಸಂಖ್ಯೆ 268 ಅಗಿದ್ದು, ಗುರುದತ್ತ ಅವರದ್ದು ಇದೇ ವಾರ್ಡಿನ ಮತಗಟ್ಟೆ 66 ಕ್ರಮ ಸಂಖ್ಯೆ 164 ಆಗಿದೆ. ಹೀಗೆ ಹಲವು ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಕಾಣೆಯಾಗಿರುವುದಲ್ಲದೆ ಮೃತಪಟ್ಟವರ ಹೆಸರು ಅಳಿಸುವ ಬದಲು ಅದನ್ನು ಹಾಗೆ ಉಳಿಸಿರುವುದು ಕಂಡು ಬಂದಿದೆ.

ಮತದಾರರ ಪಟ್ಟಿಯಿಂದ ಏಕಾಏಕಿ ಹೆಸರನ್ನು ಕಿತ್ತುಹಾಕಿರುವ ಕುರಿತು ದಿನೇಶ್ ಭಂಡಾರಿ ಅವರು ರಾಜ್ಯ ಚುನಾವಣಾ ಆಯೋಗಕ್ಕೆ‌ ದೂರು ನೀಡಲು ನಿರ್ಧರಿಸಿದ್ದಾರೆ. ಇದೀಗ ತಮ್ಮ ಎಡವಟ್ಟಿನ ಅರಿವಾದ ಚುನಾವಣಾ ಶಾಖೆಯ ಅಧಿಕಾರಿಗಳು ದಿನೇಶ ಭಂಡಾರಿ ಮತ್ತೆ ಕೆಲವರನ್ನು ಸಂಪರ್ಕಿಸಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಿಕೊಳ್ಳಲು ದುಂಬಾಲು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.